ʼಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆʼ; ಪೇಜಾವರ ಶ್ರೀ, ಬಿಕೆ ಹರಿಪ್ರಸಾದ್ ನಡುವೆ ಶುರುವಾಯ್ತು ಜಾತಿ ಗಣತಿ ಸಂಘರ್ಷ
ನ್ಯೂಸ್ ಆ್ಯರೋ: ಪೇಜಾವರ ಸ್ವಾಮೀಜಿ ಅವರು ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ. “ಪೇಜಾವರ ಸ್ವಾಮೀಜಿ ಅವರು ಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ” ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಅವರಿಗೆ ಪೇಜಾವರ ಶ್ರೀಗಳು ತಿರುಗೇಟು ನೀಡಿದ್ದು, ಸಮಾಜದಲ್ಲಿ ಮಾತನಾಡುವ ಹಕ್ಕು ಕೇವಲ ರಾಜಕಾರಣಿಗಳಿಗೆ ಮಾತ್ರ ಎಂದು ಹೇಳಲಿ ಎಂದು ಸವಾಲೆಸೆದಿದ್ದಾರೆ.
ಮಂಗಳೂರಿನ ಕುಳಾಯಿ ಚಿತ್ರಾಪುರ ಮಠದಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು ಬಿಕೆ ಹರಿಪ್ರಸಾದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸಮಾಜದಲ್ಲಿ ಮಾತನಾಡುವ ಹಕ್ಕು ಇರುವುದು ಕೆಲವು ರಾಜಕಾರಣಿಗಳಿಗೆ ಮಾತ್ರವೇ? ಪ್ರಜೆಗಳಿಗೂ ಹಕ್ಕಿಲ್ಲವೇ, ರಾಜಕಾರಣಿಗಳಿಗೆ ಮಾತ್ರ ಹಕ್ಕಿದೆ ಅಂತ ಹೇಳಲಿ.
ಪ್ರಜಾಪ್ರಭುತ್ವ ಸತ್ತು ಹೋಯ್ತು, ಈಗ ಇರೋದು ರಾಜಕಾರಣಿಗಳ ರಾಜ್ಯ ಅಂತ ಹೇಳಿ ಬಿಡಲಿ. ಹಾಗಿಲ್ಲ ಅಂತಾದ್ರೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪೀಠಾಧಿಪತಿ ಮಾತ್ರ ಅಲ್ಲ, ಸಾಮಾನ್ಯ ಪ್ರಜೆಗೂ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿರಲೇಬೇಕು. ಹಾಗಾಗಿ ನಾವು ಅದನ್ನ ಮಾತ್ರ ಮಾಡಿದ್ದೇವೆಯೇ ಹೊರತು ಬೇರೆ ಮಾಡಿಲ್ಲ ಎಂದು ಹೇಳಿದರು. ಇಂಥಹ ರಾಜಕಾರಣಿಗಳಿಗೆ ಸದ್ಭುದ್ದಿ ಕೊಡಲಿ ಎಂದು ದೇವರಲ್ಲಿ ಕೇಳುತ್ತಿದ್ದೇನೆ. ನಮ್ಮ ಪಂಗಡದೊಳಗೆ ಯಾರಿಗೆಲ್ಲಾ ವೈಮನಸ್ಸು ಇದೆಯೋ ಅದು ದೂರವಾಗಲಿ ಎಂದು ಅವರು ಪ್ರಾರ್ಥಿಸಿದರು.
ಸರ್ಕಾರ ಹಣ ಖರ್ಚು ಮಾಡಿ ಜಾತಿ ಜನಗಣತಿ ಮಾಡಿ ಮುಚ್ಚಿಟ್ಟಿದೆ. ಜ್ಯಾತ್ಯಾತೀತವಾಗಿರುವ ರಾಷ್ಟ್ರದಲ್ಲಿ ಜಾತಿ ಗಣತಿ ಯಾಕೆ ಬೇಕು?. ಒಂದು ಕಡೆ ಜಾತಿ ಆಧಾರದಲ್ಲಿ ರಾಜಕೀಯ ಬೇಡ ಎನ್ನುತ್ತೀರಿ. ಇನ್ನೊಂದು ಕಡೆ ಜಾತಿ ಗಣತಿ ಎನ್ನುತ್ತೀರಿ ಈ ಜಾತಿ ಗಣತಿ ಯಾಕೆ ಎನ್ನುವುದು ತಿಳಿಯುತ್ತಿಲ್ಲ ಎಂದು ಪೇಜಾವರ ಮಠದ ಸ್ವಾಮೀಜಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದರು
ಜಾತಿ ಗಣತಿ ಕುರಿತು ಹೇಳಿಕೆ ನೀಡಿರುವ ಪೇಜಾವರ ಶ್ರೀಗಳ ವಿರುದ್ಧ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ “ಸ್ವಾಮೀಜಿ ಅವರು ಪುಡಿ ರಾಜಕಾರಣಿಗಳಂತೆ ಹೇಳಿಕೆ ನೀಡುತ್ತಿದ್ದಾರೆ. ಈಗಿನ ಸ್ವಾಮೀಜಿ ಅವರು ಅಯೋಧ್ಯೆಯಿಂದ ಹಿಡಿದು ಎಲ್ಲ ವಿಷಯಗಳ ಬಗ್ಗೆ ಹೇಳಿಕೆ ನೀಡುತ್ತಿರುತ್ತಾರೆ. ಜಾತಿ ಗಣತಿ ಬಗ್ಗೆ ಮಾತನಾಡುವ ಸ್ವಾಮೀಜಿ ಅವರು ತಮ್ಮ ಮಠದಲ್ಲಿ ಪಂಕ್ತಿಭೋಜನ ಹಾಗೂ ಮಡೆಸ್ನಾನ ಉತ್ತೇಜನ ನೀಡುತ್ತಾರೆ. ಪೇಜಾವರ ಸ್ವಾಮೀಜಿ ಅವರು ಕಾವಿ ಬಟ್ಟೆ ತ್ಯಜಿಸಿ ಬಂದರೆ ಅವರಿಗೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದರು.
ಸದ್ಯ ಜಾತಿ ಗಣತಿ ವಿಚಾರವಾಗಿ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಮತ್ತು ಪೇಜಾವರ ಶ್ರೀಗಳ ನಡುವೆ ವಾಗ್ಯುದ್ದ ನಡೆಯುತ್ತಿದೆ. ಪೇಜಾವರ ಶ್ರೀಗಳ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಬಿಕೆ ಹರಿಪ್ರಸಾದ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕರು ಬಿಕೆ ಹರಿಪ್ರಸಾದ್ ವಿರುದ್ಧ ಹರಿಹಾಯ್ದಿದ್ದಾರೆ.
Leave a Comment