ಕೋಲ್ಕತ್ತಾ ವೈದ್ಯೆ ರೇಪ್ & ಮರ್ಡರ್ ಕೇಸ್: ಆರೋಪಿ ರಾಯ್ ಗೆ ಜೀವಾವಧಿ ಶಿಕ್ಷೆ

ನ್ಯೂಸ್ ಆ್ಯರೋ: ಕೋಲ್ಕತ್ತಾದ ಆರ್‌ಜಿಕರ್ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ತರಬೇತಿ ನಿರತ ವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಕೋಲ್ಕತ್ತಾದ ಆರ್‌ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಸಂಜಯ್ ರಾಯ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ಪಶ್ಚಿಮ ಬಂಗಾಳದ ಸೀಲ್ಡಾ ನ್ಯಾಯಾಲಯ, 50,000 ರೂಪಾಯಿ ದಂಡವನ್ನೂ ವಿಧಿಸಿದೆ.
ಕಳೆದ ವರ್ಷ ಆಗಸ್ಟ್ 9 ರಂದು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ತರಬೇತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಪ್ರಕರಣದಲ್ಲಿ ರಾಯ್ ತಪ್ಪಿತಸ್ಥ ಎಂದು ಸೀಲ್ಡಾದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅನಿರ್ಬನ್ ದಾಸ್ ಕಳೆದ ಶನಿವಾರ ಘೋಷಿಸಿದ್ದರು.
ಈ ಕೃತ್ಯವು ದೇಶಾದ್ಯಂತ ಭಾರೀ ಪ್ರತಿಭಟನೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು. ಕಳೆದ ವರ್ಷ ಆಗಸ್ಟ್ 9ರಂದು 31 ವರ್ಷದ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಕೋಣೆಯಲ್ಲಿ ಪತ್ತೆಯಾದ ನಂತರ ಆಗಸ್ಟ್ 10 ರಂದು ಕೋಲ್ಕತ್ತಾ ಪೊಲೀಸರ ಮಾಜಿ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ನನ್ನು ಬಂಧಿಸಲಾಗಿತ್ತು.
ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕತ್ತು ಹಿಸುಕಿ ಕೊಂದು ಹಾಕಿದ ಆರೋಪದಲ್ಲಿ ರಾಯ್ ತಪ್ಪಿತಸ್ಥನೆಂದು ಕಂಡುಬಂದಿದ್ದು, ನ್ಯಾಯಾಧೀಶರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸೆಕ್ಷನ್ 64, 66 ಮತ್ತು 103(1) ರ ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದ್ದಾರೆ.
ಸಂಜಯ್ ರಾಯ್ ಜೀವಾವಧಿ ಶಿಕ್ಷೆಗೆ ಗುರಿಯಾದ ನಂತರ, ಸಾವಿಗೀಡಾದ ವೈದ್ಯೆ ಕುಟುಂಬಕ್ಕೆ ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ 7 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಕೂಡ ನ್ಯಾಯಾಲಯ ಆದೇಶಿಸಿದೆ.
ಇನ್ನು “ಯಾವುದೇ ಕಾರಣವಿಲ್ಲದೆ ನನ್ನನ್ನು ಆರೋಪಿಸಲಾಗಿದೆ. ನಾನು ಯಾವಾಗಲೂ ರುದ್ರಾಕ್ಷ ಸರಪಳಿಯನ್ನು ಧರಿಸುತ್ತೇನೆ ಎಂದು ನಾನು ನಿಮಗೆ ಮೊದಲೇ ಹೇಳಿದ್ದೆ. ನಾನು ಅಪರಾಧ ಮಾಡಿದ್ದರೆ, ಅದು ಅಪರಾಧದ ಸ್ಥಳದಲ್ಲಿ ಮುರಿಯುತ್ತಿತ್ತು. ನನಗೆ ಮಾತನಾಡಲು ಅವಕಾಶವಿರಲಿಲ್ಲ. ಅವರು ನನ್ನನ್ನು ಅನೇಕ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದರು. ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ನೀವು ಇದನ್ನೆಲ್ಲಾ ನೋಡಿದ್ದೀರಿ ಸರ್. ನಾನು ನಿಮಗೆ ಮೊದಲೇ ಹೇಳಿದ್ದೆ, ”ಎಂದು ರಾಯ್ ನ್ಯಾಯಾಲಯದಲ್ಲಿ ಹೇಳಿರುವುದಾಗಿ ವರದಿಯಾಗಿದೆ.
Leave a Comment