
ಸನಾತನ ಸ್ಟೇಟ್ಮೆಂಟ್ ಅನ್ನು ಬಿಜೆಪಿಗರು ತಿರುಚಿದ್ದಾರೆ ಎಂದ ಉದಯನಿಧಿ – ಮೊಕದ್ದಮೆಗಳನ್ನು ಕಾನೂನುಬದ್ಧ ಎದುರಿಸಲು ಸಿದ್ಧ ಎಂದ ತಮಿಳುನಾಡಿನ ಸಚಿವ
- ರಾಷ್ಟ್ರೀಯ ಸುದ್ದಿ
- September 7, 2023
- No Comment
- 38
ನ್ಯೂಸ್ ಆ್ಯರೋ : ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಇದೀಗ ನೇರವಾಗಿ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಕೇಸರಿ ಪಕ್ಷದ ನಾಯಕರು ನನ್ನ ಹೇಳಿಕೆಗಳನ್ನು ತಿರುಚುತ್ತಿದ್ದಾರೆ ಎಂದು ದೂರಿದ ಅವರು, ನನ್ನ ವಿರುದ್ಧ ದಾಖಲಾಗಿರುವ ಮೊಕದ್ದಮೆಗಳನ್ನು ಕಾನೂನುಬದ್ಧವಾಗಿ ಎದುರಿಸಲು ಸಿದ್ಧ ಎಂದು ತಿರುಗೇಟು ನೀಡಿದ್ದಾರೆ.
ಜಗತ್ತನ್ನೇ ತಿರುಗುವ ಪ್ರಧಾನಿ ಮೋದಿ ಅವರು ಮಣಿಪುರ ಹಿಂಸಾಚಾರದ ಕುರಿತು ಪ್ರಶ್ನೆಗಳನ್ನು ಎದುರಿಸಲು ಭಯಪಡುತ್ತಾರೆ. ಕಳೆದ 9 ವರ್ಷಗಳಿಂದ ಬಿಜೆಪಿ ನೀಡಿದ ಭರವಸೆಗಳೆಲ್ಲವೂ ಪೊಳ್ಳಾಗಿದ್ದು, ಇಂದು ಬಿಜೆಪಿ ವಿರುದ್ಧ ಇಡೀ ದೇಶವೇ ಪ್ರಶ್ನೆ ಮಾಡುತ್ತಿದೆ.
ನನ್ನ ಭಾಷಣವನ್ನು ಜನಾಂಗೀಯ ಹತ್ಯೆಗೆ ಪ್ರಚೋದನೆಯಾಗಿದೆ ಎಂದು ಬಿಜೆಪಿ ನಾಯಕರು ತಿರುಚಿದ್ದಾರೆ. ಅವರ ರಕ್ಷಣೆಗೆ ನನ್ನನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ನಕಲಿ ಸುದ್ದಿಗಳ ಹರಡುತ್ತಿರುವ ಬಗ್ಗೆ ಮೋದಿ ಮತ್ತು ಅವರೊಂದಿಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸುತ್ತಿದ್ದಾರೆ.
ಅಪಪ್ರಚಾರ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ನಾನೇ ದೂರು ಕೊಡಬಹುದು. ಆದರೆ ಅದು ಬದುಕುವ ಲಕ್ಷಣವಲ್ಲ ಎಂದು ವ್ಯಂಗ್ಯವಾಡಿದರು.
ಘಟನೆಯ ಹಿನ್ನೆಲೆ
ಶನಿವಾರ ಚೆನ್ನೈನಲ್ಲಿ ನಡೆದ ಸನಾತನ ನಿರ್ಮೂಲನ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವೊಂದು ವಿಚಾರಗಳನ್ನು ಕೇವಲ ವಿರೋಧಿಸಿದರೆ ಸಾಲದು, ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ನಾವು ಡೆಂಘೆ, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧ ಮಾಡಬಾರದು, ಅವುಗಳನ್ನು ಶಾಶ್ವತವಾಗಿ ತೊಡೆದುಹಾಕಬೇಕು. ಅದರಂತೆ ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನಿಡಿದ್ದರು.
ಈ ವಿವಾದಾತ್ಮಕ ಹೇಳಿಕೆಗೆ ರಾಷ್ಟ್ರದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟ್ಯಾಲಿನ್ ವಿರುದ್ಧ ಯಾಕೆ ಸುಮೋಟೋ ಕೇಸ್ ದಾಖಲಿಸಿಲ್ಲ ಎಂದು ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಉದಯನಿಧಿ ಅವರ ಹೇಳಿಕೆ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.