ಫೇಸ್‌ಬುಕ್‌ ಲೈವ್ ನಲ್ಲೇ ಶಿವಸೇನೆಯ ಮುಖಂಡನ‌ ಗುಂಡಿಟ್ಟು ಹತ್ಯೆ – ಸಂದರ್ಶಕನಿಂದಲೇ ಉದ್ಧವ್ ಠಾಕ್ರೆ ಬಣದ ಮುಖಂಡನ ಕಗ್ಗೊಲೆ..!!

ನ್ಯೂಸ್ ಆ್ಯರೋ : ಫೇಸ್‌ಬುಕ್ ಲೈವ್‌ನಲ್ಲಿದ್ದಾಗಲೇ ಉದ್ದವ್ ಠಾಕ್ರೆ ಬಣದ ಶಿವಸೇನಾ ನಾಯಕನ ಪುತ್ರರೊಬ್ಬರನ್ನು (Shiv Sena UBT leader son shot dead) ಗುಂಡು ಹೊಡೆದು ಹತ್ಯೆ ಮಾಡಿದ ಘಟನೆ ಇಂದು ಸಂಜೆ ಮುಂಬೈನಲ್ಲಿ ನಡೆದಿದೆ.

ಶಿವಸೇನೆಯ ಯುಬಿಟಿ ನಾಯಕನ ಮಗ ಅಭಿಷೇಕ್ ಘೋಸಲ್ಕರ್ ಅವರೊಂದಿಗೆ ಫೇಸ್‌ಬುಕ್ ಲೈವ್ ಮಾಡುತ್ತಿದ್ದ ವ್ಯಕ್ತಿಯೇ ಅವರಿಗೆ ಶೂಟ್ ಮಾಡಿದ್ದಾನೆ. ಬಳಿಕ ತಾನು ಶೂಟ್ ಮಾಡಿಕೊಂಡು ಸಾವಿಗೀಡಾಗಿದ್ದಾನೆ. ಫೇಸ್‌ಬುಕ್ ಲೈವ್‌ನಲ್ಲಿ ಚಿತ್ರೀಕರಣದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಶಿವಸೇನಾ (ಯುಬಿಟಿ) ನಾಯಕ ವಿನೋದ್ ಘೋಸಲ್ಕರ್ ಅವರ ಪುತ್ರ ಅಭಿಷೇಕ್ ಘೋಸಲ್ಕರ್ ಅವರು ಮಾರಿಸ್ ಭಾಯ್ ಅವರೊಂದಿಗೆ ಫೇಸ್‌ಬುಕ್ ಲೈವ್‌ಸ್ಟ್ರೀಮ್ ಮಾಡುತ್ತಿದ್ದರು.

ಮಾರಿಸ್ ಭಾಯ್ ನಂತರ ಲೈವ್‌ಸ್ಟ್ರೀಮ್ ಅನ್ನು ತೊರೆದಿದ್ದು ನಂತರ ಘೋಸಲ್ಕರ್ ಮೇಲೆ ಮೂರು ಬಾರಿ ಗುಂಡು ಹಾರಿಸಿದರು. ಇದಾದ ನಂತರ ಮಾರಿಸ್ ಭಾಯ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಭಿಷೇಕ್ ಘೋಸಲ್ಕರ್ ಅವರನ್ನು ಕರುಣಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಅಭಿಷೇಕ್ ಘೋಸಲ್ಕರ್‌ಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನ ದಹಿಸರ್ ಪ್ರದೇಶದ ಎಂಎಚ್‌ಬಿ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತ ಅಭಿಷೇಕ್ ಅವರು ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಮಾಜಿ ಕೌನ್ಸಿಲರ್ ವಿನೋದ್ ಘೋಸಲ್ಕರ್ ಅವರ ಪುತ್ರರಾಗಿದ್ದಾರೆ.

ಕೆಲವು ಭಿನ್ನಾಭಿಪ್ರಾಯಗಳ ನಂತರ ಇಬ್ಬರು ಇತ್ತೀಚೆಗೆ ಹೊಂದಾಣಿಕೆ ಮಾಡಿಕೊಂಡಿದ್ದರು ಮತ್ತು ವೆಬ್‌ಕಾಸ್ಟ್ ಆಗುತ್ತಿರುವ ಕಾರ್ಯಕ್ರಮಕ್ಕಾಗಿ ಘೋಸಲ್ಕರ್ ಅವರನ್ನು ಅವರ ಕಚೇರಿಗೆ ಆಹ್ವಾನಿಸಲಾಗಿತ್ತು. ಈ ವೇಳೆ ಅವರ ಮೇಲೆ ಗುಂಡು ಹೊಡೆದು ಸಾಯಿಸಲಾಯಿತು. ಆದರೆ, ಗುಂಡಿನ ದಾಳಿಯ ಹಿಂದಿನ ಕಾರಣ ಏನು ಎಂಬುದು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.