ಬಿಸಿಲಬೇಗೆಯಿಂದ ಜನತೆ ತತ್ತರ, ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟ – ಬಾಯಾರಿಕೆ ಇಲ್ದೇ ಇದ್ರೂ ನೀರು ಕುಡೀರಿ, ಇನ್ನು ಏನೇನಿದೆ ಸೂಚನೆಗಳು?

ನ್ಯೂಸ್‌ ಆ್ಯರೋ : ದೇಶದಲ್ಲಿ ಶಾಖದ ಅಲೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಮಾರ್ಚ್​ ತಿಂಗಳಿನಲ್ಲಿ ಶಾಖದ ಅಲೆಯು ಹೆಚ್ಚಾಗುತ್ತಾ ಹೋದರೆ ಜನರು ಯಾವ ರೀತಿ ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು ಎಂಬುದರ ಕುರಿತು ಸಲಹೆ ನೀಡಿದೆ.

ನಿಮ್ಮ ಸುತ್ತಮುತ್ತಲಲ್ಲಿ ಯಾರಾದರೂ ಅಧಿಕ ಬಿಸಿಲಿನಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದರೆ ತಕ್ಷಣ 108/102 ಗೆ ಕರೆ ಮಾಡಬೇಕು. ನಿಮಗೆ ಬಾಯಾರಿಕೆಯಿಲ್ಲದಿದ್ದರೂ, ಸಾಧ್ಯವಾದಾಗಲೆಲ್ಲಾ ಸಾಕಷ್ಟು ನೀರು ಕುಡಿಯುವುದು ಸೂಕ್ತ. ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ನಿಂಬೆ ನೀರು, ಮಜ್ಜಿಗೆ/ ಲಸ್ಸಿ, ಸ್ವಲ್ಪ ಉಪ್ಪು ಸೇರಿಸಿದ ಹಣ್ಣಿನ ರಸವನ್ನು ಸೇವಿಸಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಶಾಖದ ಅಲೆಯು 2015 ಕ್ಕಿಂತ 2020- 23ರ ವೇಳೆಗೆ ದ್ವಿಗುಣಗೊಂಡಿದೆ. ಕಳೆದ ವರ್ಷ ಮಾರ್ಚ್​ನಲ್ಲಿ ತೀವ್ರ ಶಾಖದ ಅಲೆಗಳು ಕೊಯ್ಲುಗಳನ್ನು ಹಾಳುಮಾಡಿತ್ತು. ವ್ಯಾಪಕವಾದ ವಿದ್ಯುತ್ ಕಡಿತಕ್ಕೂ ಕೂಡ ಕಾರಣವಾಯಿತು ಎಂದು ಹೇಳಿದೆ.

ಮಾರ್ಗಸೂಚಿಯ ಇತರ ಅಂಶಗಳು

  • ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಾಗ ತೆಳು, ಸಡಿಲವಾದ, ಹತ್ತಿಯ ಉಡುಪುಗಳನ್ನು ಧರಿಸಲು ಮತ್ತು ಛತ್ರಿ ಮತ್ತು ಕ್ಯಾಪ್​​ಗಳನ್ನು ಬಳಸಬೇಕು
  • ಸ್ಥಳೀಯ ಹವಾಮಾನ ಸುದ್ದಿಗಳಿಗಾಗಿ ರೇಡಿಯೊವನ್ನು ಕೇಳಲು, ಪತ್ರಿಕೆಗಳನ್ನು ಓದಲು ಮತ್ತು ಟಿವಿ ವೀಕ್ಷಿಸಲು ಸರ್ಕಾರವು ನಿವಾಸಿಗಳನ್ನು ಕೇಳಿದೆ. ಜನರು ಭಾರತೀಯ ಹವಾಮಾನ ಇಲಾಖೆಯ ವೆಬ್‌ಸೈಟ್ ಅನ್ನು ಸಹ ಟ್ರ್ಯಾಕ್ ಮಾಡಬಹುದು.
  • ಜೊತೆಗೆ ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಗಡೆ ಬಿಸಿಲಿನಲ್ಲಿ ಕೆಲಸ ಮಾಡುವವರು, ಮಾನಸಿಕ ಅಸ್ವಸ್ಥತೆ ಹೊಂದಿರುವವರು, ದೈಹಿಕವಾಗಿ ಅಸ್ವಸ್ಥರಾಗಿರುವವರು, ವಿಶೇಷವಾಗಿ ಹೃದ್ರೋಗ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವವರು ಹೆಚ್ಚಿನ ಕಾಳಜಿಯನ್ನು ವಹಿಸುವುದು ಅಗತ್ಯವಾಗಿದೆ.
  • ವಿಶೇಷವಾಗಿ ಮಧ್ಯಾಹ್ನ 12:00 ರಿಂದ 3:00 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸುವುದು ಅಗತ್ಯವಾಗಿದೆ. ಆಲ್ಕೋಹಾಲ್, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ತಂಪು ಪಾನೀಯಗಳು ಅಥವಾ ಹೆಚ್ಚಿನ ಪ್ರಮಾಣದ ಸಕ್ಕರೆಯೊಂದಿಗೆ ಪಾನೀಯಗಳನ್ನು ಸೇವಿಸಬೇಡಿ. ಏಕೆಂದರೆ ಇವುಗಳು ಹೆಚ್ಚು ದೇಹದ ದ್ರವದ ನಷ್ಟಕ್ಕೆ ಕಾರಣವಾಗಬಹುದು ಅಥವಾ ಹೊಟ್ಟೆ ಸೆಳೆತಕ್ಕೆ ಕಾರಣವಾಗಬಹುದು
  • ಸಾಕಷ್ಟು ಬಿಸಿಲಿರುವ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಿದಾಗ, ಮಕ್ಕಳನ್ನು ಮತ್ತು ನಿಮ್ಮ ಸಾಕು ಪ್ರಾಣಿಗಳನ್ನು ವಾಹನದ ಒಳಗಡೆಯೇ ಕೂರಿಸಬೇಡಿ. ವಾಹನದೊಳಗಿನ ತಾಪಮಾನವು ಅಪಾಯಕಾರಿಯಾಗಬಹುದು.
  • ತಲೆತಿರುಗುವಿಕೆ ಅಥವಾ ಮೂರ್ಛೆ, ವಾಕರಿಕೆ ಅಥವಾ ವಾಂತಿ, ತಲೆನೋವು, ವಿಪರೀತ ಬಾಯಾರಿಕೆ, ಅಸಾಧಾರಣವಾಗಿ ಗಾಢ ಹಳದಿ ಮೂತ್ರದೊಂದಿಗೆ ಮೂತ್ರ ವಿಸರ್ಜನೆ ಕಡಿಮೆಯಾಗುವುದು ಮತ್ತು ತ್ವರಿತ ಉಸಿರಾಟ ಮತ್ತು ಹೃದಯ ಬಡಿತವನ್ನು ಒಳಗೊಂಡಿರುವ ಶಾಖದ ಒತ್ತಡದ ಲಕ್ಷಣಗಳನ್ನು ಕಂಡು ಬಂದರೆ ತಕ್ಷಣ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.