
G20 Summit 2023 : ಇಂದಿನಿಂದ ಎರಡು ದಿನಗಳ ಕಾಲ ಜಿ20 ಶೃಂಗಸಭೆ – ವಿಶ್ವ ಗುರುವಾಗುವತ್ತ ಭಾರತದ ದಿಟ್ಟ ಹೆಜ್ಜೆ
- ರಾಷ್ಟ್ರೀಯ ಸುದ್ದಿ
- September 9, 2023
- No Comment
- 50
ನ್ಯೂಸ್ ಆ್ಯರೋ : ವಿಶ್ವ ಮಟ್ಟದಲ್ಲಿ ಭಾರತ ಪ್ರಬಲವಾಗುತ್ತಿರುವ ಸೂಚನೆಗಳ ನಡುವೆ ಇಂದಿನಿಂದ 2 ದಿನಗಳ ಕಾಲ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ (G20 Summit) ಕೌಂಟ್‌ಡೌನ್ ಶುರುವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಭಾರತ ಆತಿಥ್ಯ ವಹಿಸುತ್ತಿರುವ ಜಿ20 ಶೃಂಗಸಭೆ ಆರಂಭವಾಗಲಿದ್ದು, ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿಶ್ವದ ಶಕ್ತಿಶಾಲಿ ಮತ್ತು ಪ್ರಭಾವಿ ನಾಯಕರು ಈಗಾಗಲೇ ನವದೆಹಲಿಗೆ ಆಗಮಿಸಿದ್ದಾರೆ.
ಗಣ್ಯರ ಪೈಕಿ ಅಮೆರಿಕ ಅಧ್ಯಕ್ಷ ಜೋ ಬಿಡನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಾಕ್ ನಿನ್ನೆ ಸಂಜೆಯೇ ದೆಹಲಿಗೆ ಆಗಮಿಸಿದ್ದಾರೆ. ಈ ಮೆಗಾ ಶೃಂಗಸಭೆಯಲ್ಲಿ 30 ಕ್ಕೂ ಹೆಚ್ಚು ದೇಶಗಳ ಉನ್ನತ ನಾಯಕರು, ಯುರೋಪಿಯನ್ ಒಕ್ಕೂಟದ ಉನ್ನತ ಅಧಿಕಾರಿಗಳು, ಆಹ್ವಾನಿತ ಅತಿಥಿ ದೇಶಗಳು ಮತ್ತು 14 ಅಂತರರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ.
ಇದರ 20 ಸದಸ್ಯ ರಾಷ್ಟ್ರಗಳಾದ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ರಿಪಬ್ಲಿಕ್ ಆಫ್ ಕೊರಿಯಾ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್‌ಎ ಮತ್ತು ಇಯು ದೇಶದ ಪ್ರತಿನಿಧಿಗಳು ಕೂಡ ಭಾಗವಹಿಸುತ್ತಿದ್ದಾರೆ.
ಇದಲ್ಲದೆ, ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್ಲ್ಯಾಂಡ್ಸ್, ನೈಜೀರಿಯಾ, ಓಮನ್, ಸಿಂಗಾಪುರ್, ಸ್ಪೇನ್ ಮತ್ತು ಯುಎಇಯ ಪ್ರತಿನಿಧಿಗಳನ್ನು ಈ ಶೃಂಗಸಭೆಗೆ ಆಹ್ವಾನಿಸಲಾಗಿದೆ. ವಿಶ್ವಸಂಸ್ಥೆ, IMF, ವಿಶ್ವ ಬ್ಯಾಂಕ್, WHO, WTO, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ, ಹಣಕಾಸು ಸ್ಥಿರತೆ ಮಂಡಳಿ ಮತ್ತು OECD ನಂತಹ ವಿಶ್ವ ಸಂಸ್ಥೆಗಳು ಸಹ G20 ಶೃಂಗಸಭೆಯಲ್ಲಿ ಭಾಗವಹಿಸುತ್ತಿವೆ.
ಇವುಗಳಲ್ಲದೆ, ಆಫ್ರಿಕನ್ ಯೂನಿಯನ್, AUDA-NEPAD, ASEAN, ISA, CDRI ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಕೂಡ G20 ಶೃಂಗಸಭೆಯಲ್ಲಿ ಭಾಗವಹಿಸಲಿವೆ. ದೆಹಲಿಯ ಪ್ರಗತಿ ಮೈದಾನದಲ್ಲಿರುವ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್ ‘ಭಾರತ್ ಮಂಡಪಂ’ ಜಿ20 ಶೃಂಗಸಭೆಯ ಕೇಂದ್ರ ಸ್ಥಾನವಾಗಿ ಮಾರ್ಪಟ್ಟಿದೆ.
ಇನ್ನು ಜಿ20 ಶೃಂಗ ಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು 15ಕ್ಕೂ ಹೆಚ್ಚು ದೇಶದ ಪ್ರಧಾನಿ ಮತ್ತು ಪ್ರತಿನಿಧಿಗಳ ಜೊತೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಆ ಪೈಕಿ ಶುಕ್ರವಾರ ಮಾರಿಷಸ್, ಬಾಂಗ್ಲಾದೇಶ, ಯುಎಸ್‌ಎ ಪ್ರಧಾನಿ ಜೊತೆ ಸಭೆ ನಡೆಸಿದರೆ, ಶನಿವಾರ ಯುಕೆ, ಜಪಾನ್, ಜರ್ಮನಿ, ಇಟಲಿ ಮತ್ತು ಭಾನುವಾರ ಕೊಮೊರೊಸ್, ಟರ್ಕಿ, ಯುಎಇ, ದಕ್ಷಿಣ ಕೊರಿಯಾ, ಇಯು/ಇಸಿ, ಬ್ರೆಜಿಲ್ ಮತ್ತು ನೈಜೀರಿಯಾ ಜೊತೆ ಸಭೆ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ದೆಹಲಿಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ವಿಶ್ವದ ಗಣ್ಯಾತಿಗಣ್ಯರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳಲಾಗುತ್ತಿದೆ.