
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ – ನಸುಕಿನ ಜಾವ ಮನೆಗೆ ನುಗ್ಗಿ ಹೊತ್ತೊಯ್ದ ಸಿಐಡಿ ಪೋಲಿಸರು
- ರಾಷ್ಟ್ರೀಯ ಸುದ್ದಿ
- September 9, 2023
- No Comment
- 57
ನ್ಯೂಸ್ ಆ್ಯರೋ : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಆಂಧ್ರದ ನಂದ್ಯಾಲದಲ್ಲಿ ಇಂದು (ಸೆ.09) ನಸುಕಿನ ಜಾವ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರ ವಿರುದ್ಧ 58 ಕೋಟಿ ಯೋಜನೆಯ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ವೆಚ್ಚವನ್ನು 371 ಕೋಟಿ ರೂ.ಗೆ ಹೆಚ್ಚಿಸಿದ ಆರೋಪ ಕೇಳಿಬಂದಿತ್ತು. ಈ ಹಗರಣ ಸಂಬಂಧ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ಸೂಚನೆ ಮೇರೆಗೆ ಐಪಿಸಿ ಸೆಕ್ಷನ್ 166, 167, 481, 420, 465, 468, 471, 409, 201, r/w 109, 34 ಮತ್ತು 37ರ ಅಡಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದೆ.
ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಹಗರಣದಲ್ಲಿ ಚಂದ್ರಬಾಬು ನಾಯ್ಡು ಅವರು ಎ1 ಆರೋಪಿಯಾಗಿದ್ದಾರೆ. ಅವರ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸ್ಕಿಲ್ ಡೆವಲಪ್ಮೆಂಟ್ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದೆ.
ಇಂದು ಬೆಳಗ್ಗೆ ನಂದ್ಯಾಲ ವಲಯದ ಡಿಐಜಿ ರಘುರಾಮಿ ರೆಡ್ಡಿ ನೇತೃತ್ವದ ಪೊಲೀಸ್ ತಂಡ ಬೆಳಗ್ಗೆ 3 ಗಂಟೆ ಸುಮಾರಿಗೆ ಚಂದ್ರಬಾಬು ನಾಯ್ಡು ಅವರನ್ನು ಬಂಧನ ಮಾಡಿದೆ. ಆರಂಭದಲ್ಲಿ ಭಾರೀ ವಿರೋಧ ವ್ಯಕ್ತಪಡಿಸಿದ ಚಂದ್ರಬಾಬು ನಾಯ್ಡು ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡ ಪೊಲೀಸರು ವಿಜಯವಾಡಗೆ ತೆರಳಿದರು.