
26 ವರ್ಷದ ಪ್ರತಿಬಾನ್ವಿತ ಟೆಕ್ಕಿಗೆ ಒಲಿಯಿತು ಬರೋಬ್ಬರಿ ₹.416 ಕೋಟಿ – ಕಿಶನ್ ಅಭಿವೃದ್ಧಿ ಪಡಿಸಿದ ವಿನೂತನ ಆ್ಯಪ್ ದಾಖಲೆ ಮೌಲ್ಯಕ್ಕೆ ಮಾರಾಟ
- ರಾಷ್ಟ್ರೀಯ ಸುದ್ದಿ
- November 7, 2023
- No Comment
- 142
ನ್ಯೂಸ್ ಆ್ಯರೋ : ಅಸ್ಸಾಂನ ಯುವಕನೋರ್ವ ಅಭಿವೃದ್ಧಿ ಪಡಿಸಿದ ಆಲ್-ಇನ್-ಒನ್ ಮೆಸೇಜಿಂಗ್ ಆ್ಯಪ್ ಅನ್ನು ₹.416 ಕೋಟಿಗೆ WordPress.com ಮತ್ತು Tumblrನ ಒಡೆತನ ಹೊಂದಿರುವ Automattic Inc. ಖರೀದಿಸಿದೆ.
ಕಿಶನ್ ಬಗಾರಿಯಾ (26) ಅಸಾಧಾರಣ ಪ್ರತಿಭೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವ Automattic Inc. ನ ಸ್ಥಾಪಕ ಮ್ಯಾಟ್ ಮುಲ್ಲೆನ್‌ವೆಗ್, ಅವರು ಟೆಕ್ ಉದ್ಯಮದ ಮೇಲೆ ಶಾಶ್ವತವಾದ ಪ್ರಭಾವವನ್ನು ಬೀರಿರುವ ‘ತಲೆಮಾರಿನ ತಂತ್ರಜ್ಞಾನ ಮೇಧಾವಿ’ ಎಂದು ಬಣ್ಣಿಸಿದ್ದಾರೆ.
Texts.com ಒಂದು ವಿನೂತನ ಆ್ಯಪ್ ಆಗಿದ್ದು, ಬಹು ಮೆಸೇಜಿಂಗ್ ಪ್ಲ್ಯಾಟ್‌ಫಾರ್ಮ್‌ಗಳನ್ನು ನಿರ್ವಹಿಸಲು ಬಳಕೆದಾರರಿಗೆ ಏಕೀಕೃತ ಡ್ಯಾಷ್‌ಬೋರ್ಡ್‌ನ್ನು ಒದಗಿಸುತ್ತದೆ. ಐಮೆಸೇಜ್, ಸ್ಲ್ಯಾಕ್, ವಾಟ್ಸ್ಯಾಪ್, ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್, ಮೆಸೆಂಜರ್, ಲಿಂಕ್ಡ್‌ಇನ್, ಸಿಗ್ನಲ್, ಡಿಸ್ಕಾರ್ಡ್ ಮತ್ತು ಎಕ್ಸ್‌ನಂತಹ ಹಲವಾರು ಜನಪ್ರಿಯ ಆ್ಯಪ್‌ಗಳನ್ನು ಸಂಯೋಜಿಸುವ ಜೊತೆಗೆ ಭವಿಷ್ಯದಲ್ಲಿ ಹೆಚ್ಚುವರಿ ಪ್ಲ್ಯಾಟ್‌ಫಾರ್ಮ್‌ಗಳನ್ನು ಸೇರಿಸಲು ಯೋಜನೆಯನ್ನೂ Texts.com ಹೊಂದಿದೆ ಎಂದು ಬಗಾರಿಯಾ ತಿಳಿಸಿದ್ದಾರೆ.
ಈ ಆ್ಯಪ್ ಬಳಕೆದಾರರ ಎಲ್ಲ ಮೆಸೇಜಿಂಗ್ ಆ್ಯಪ್‌ಗಳನ್ನು ಒಂದು ಅನುಕೂಲಕರ ತಾಣದಲ್ಲಿ ಕ್ರೋಡೀಕರಿಸುವ ಮೂಲಕ ಅವರಿಗೆ ಸಂವಹನವನ್ನು ಸರಳಗೊಳಿಸುತ್ತದೆ.
ಗುರುವಾರ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಿಂದ ಹುಟ್ಟೂರು ದಿಬ್ರುಗಡಕ್ಕೆ ಮರಳಿರುವ ಬಗಾರಿಯಾ, ಒಪ್ಪಂದದ ಪ್ರಕ್ರಿಯೆ ಕಳೆದ ಮೂರು ತಿಂಗಳುಗಳಿಂದಲೂ ನಡೆಯುತ್ತಿತ್ತು ಎಂದು ತಿಳಿಸಿದರು.
Texts.com ನಲ್ಲಿ ಕಾರ್ಯವನ್ನು ಮುಂದುವರಿಸುವ ತನ್ನ ಬದ್ಧತೆಯನ್ನು ದೃಢಪಡಿಸಿದ ಅವರು, ಆ್ಯಪ್‌ಗೆ ಸಂಬಂಧಿಸಿದಂತೆ ಇನ್ನೂ ಸಾಧಿಸುವುದು ಸುಮಾರಷ್ಟಿದೆ ಎಂದು ಹೇಳಿಕೊಂಡಿದ್ದಾರೆ.