ಸಮುದ್ರ ಪಾಲಾಗಿದ್ದ ನಾಲ್ವರು ವಿದ್ಯಾರ್ಥಿನಿಯರ ಮೃತದೇಹ ಪತ್ತೆ; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
ನ್ಯೂಸ್ ಆ್ಯರೋ: ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ ತೆರಳಿದ್ದ ಮಕ್ಕಳಲ್ಲಿ ನಾಲ್ವರು ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದರು. ನಿನ್ನೆ ರಾತ್ರಿಯೇ ಓರ್ವ ವಿದ್ಯಾರ್ಥಿನಿಯ ಶವ ಪತ್ರೆಯಾಗಿತ್ತು, ಇದೀಗ ತೀವ್ರ ಹುಡುಕಾಟದ ಬಳಿಕ ಇನ್ನುಳಿದ ಮೂವರ ಮೃತದೇಹಗಳು ಪತ್ತೆಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲ ತೀರದಲ್ಲಿ ಈ ದುರ್ಘಟನೆ ನಡೆದಿದೆ. ಕೋಲಾರದ ಮುಳಬಾಗಿಲಿನಿಂದ ಕೊತ್ತೂರು ಮೂರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಎಂದು ತಿಳಿದು ಬಂದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 260 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಭಾನುವಾರ ವಸತಿ ಶಾಲೆಯಿಂದ 54 ಮಂದಿ ವಿದ್ಯಾರ್ಥಿಗಳು, 6 ಶಿಕ್ಷಕರು ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಹೋಗಿದ್ದರು. ನಿನ್ನೆ ಸಂಜೆ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜಲು ತೆರಳಿದಾಗ ಅಲೆಗಳ ರಭಸಕ್ಕೆ ಏಳು ವಿದ್ಯಾರ್ಥಿಗಳು ಕೊಚ್ಚಿ ಹೋಗಿದ್ದರು. ಅವರಲ್ಲಿ ಮೂವರನ್ನು ನಿನ್ನೆಯೇ ರಕ್ಷಣೆ ಮಾಡಲಾಗಿತ್ತು. ಓರ್ವ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಳು. ಇನ್ನುಳಿದವರಿಗಾಗಿ ನಿನ್ನೆಯಿಂದ ತೀವ್ರ ಹುಡುಕಾಟ ನಡೆಸಲಾಗಿತ್ತು. ಆದರೆ ಆ ಮೂವರು ಮಕ್ಕಳು ಇದೀಗ ಶವವಾಗಿ ಪತ್ತೆಯಾಗಿದ್ದಾರೆ.
ಕಳೆದ ದಿನ ಸಂಜೆ ಕಡಲ ತೀರದಲ್ಲಿ ಆಟವಾಡುತ್ತಿದ್ದ 54 ವಿದ್ಯಾರ್ಥಿಗಳ ಏಳು ಜನ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜಲು ಹೋಗಿದ್ದಾರೆ. ಈ ಪೈಕಿ ಓರ್ವ ವಿದ್ಯಾರ್ಥಿನಿ ಶವವಾಗಿ ಪತ್ತೆಯಾಗಿದ್ದಳು. ಮೃತ ವಿಧ್ಯಾರ್ಥಿನಿ 15 ವರ್ಷದ ಶ್ರಾವಂತಿಕಾ ಎಂದು ತಿಳಿದು ಬಂದಿದೆ. ಇದೀಗ ವಿದ್ಯಾರ್ಥಿನಿಯರಾದ ಯಶೋಧ, ವೀಕ್ಷಣಾ, ಲಿಪಿಕಾ ಎನ್ನುವರ ಮೃತ ದೇಹ ಪತ್ತೆಯಾಗಿದೆ. ಇನ್ನು ರಕ್ಷಣೆಗೊಳಗಾದ ಮೂವರು ವಿಧ್ಯಾರ್ಥಿನಿಯರಿಗೆ RNS ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಮುರುಡೇಶ್ವರ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಈ ಮೂವರ ಶವ ಪತ್ತೆಯಾಗಿದ್ದು, ಮೃತ ದೇಹವನ್ನು ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆ ಪೋಲಿಸರು ದಡಕ್ಕೆ ತಂದಿದ್ದಾರೆ. ಸಾವಿಗೀಡಾದ ನಾಲ್ವರು ವಿದ್ಯಾರ್ಥಿನಿಯರ ಪೋಷಕರು ಇದೀಗ ಮುರುಡೇಶ್ವರಕ್ಕೆ ಆಗಮಿಸಿದ್ದಾರೆ. ಹೆತ್ತವೆ ಆಕ್ರಂದನ ಮುಗಿಲು ಮುಟ್ಟಿದೆ.
ಮಕ್ಕಳ ಸಂಬಂಧಿಕರು ವಸತಿ ಶಾಲೆ ಎದುರಿನ ಗೇಟ್ ಬಳಿ ಜಮಾಯಿಸುತ್ತಿದ್ದಾರೆ. ವಸತಿ ಶಾಲೆಗೆ ಮುಳಬಾಗಿಲು ತಹಶೀಲ್ದಾರ್ ಭೇಟಿ, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Leave a Comment