ಸಿಎಂಗಿಂದು ಅಗ್ನಿ ಪರೀಕ್ಷೆ; ತವರು ಜಿಲ್ಲೆಯಲ್ಲೇ ವಿಚಾರಣೆ ಎದುರಿಸಲಿರುವ ಸಿದ್ದು
ನ್ಯೂಸ್ ಆ್ಯರೋ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಲಿದ್ದಾರೆ.
ಲೋಕಾಯುಕ್ತ ಕಚೇರಿಗೆ ಇಂದು ಬೆಳಿಗ್ಗೆ 10 ಗಂಟೆಗೆ ತೆರಳಿಸುವ ಸಿದ್ದರಾಮಯ್ಯ ಖುದ್ದು ವಿಚಾರಣೆಗೆ ಹಾಜರಾಗಲಿದ್ದಾರೆ. ತಮ್ಮ ನಾಲ್ಕೂವರೆ ದಶಕಗಳ ಸುದೀರ್ಘ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ವಿಚಾರಣೆ ಎದುರಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಅಧಿಕಾರದಲ್ಲಿರುವ ಮುಖ್ಯಮಂತ್ರಿಯೊಬ್ಬರು ಲೋಕಾಯುಕ್ತ ವಿಚಾರಣೆಗೆ ಹಾಜರಾಗುತ್ತಿರುವುದೂ ಕೂಡ ರಾಜ್ಯದಲ್ಲಿ ಇದೇ ಮೊದಲಾಗಿದೆ.
ಈ ನಡುವೆ ಸಿದ್ದರಾಮಯ್ಯ ಅವರು ವಿಚಾರಣೆಗೆ ಹಾಜರಾಗಿರುವ ಹಿನ್ನೆಲೆಯಲ್ಲಿ ಮೈಸೂರು ಲೋಕಾಯುಕ್ತ ಕಚೇರಿ ಸುತ್ತಮುತ್ತ ನಗರ ಪೊಲೀಸರು ಬಿಗಿ ಭದ್ರತೆ ನಿಯೋಜಿಸಿದ್ದಾರೆ. ನಗರದ ಕೃಷ್ಣ ವಿಲಾಸ ರಸ್ತೆ ಮತ್ತು ದಿವಾನ್ಸ್ ರಸ್ತೆ ಜಂಕ್ಷನ್ ನಲ್ಲಿರುವ ಲೋಕಾಯುಕ್ತ ಕಚೇರಿ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಲೋಕಾಯುಕ್ತ ವಿಚಾರಣೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಮಂಗಳವಾರ ರಾತ್ರಿ ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಆಪ್ತ ಸಚಿವರಾದ ಭೈರತಿ ಸುರೇಶ್, ಈಶ್ವರ್ ಖಂಡ್ರೆ ಜತೆ ಗೌಪ್ಯ ಸಭೆ ನಡೆಸಿದರು. ಸಭೆ ಬಳಿಕ ಬೆಂಗಳೂರಿಗೆ ವಾಪಸ್ ಆದರು.
ಮುಡಾದಿಂದ ಸ್ವಾಧೀನಪಡಿಸಿಕೊಂಡಿರುವ ಅವರ ಜಮೀನಿಗೆ ಹೋಲಿಸಿದರೆ ಸಿದ್ದರಾಮಯ್ಯ ಅವರ ಪತ್ನಿ ಬಿಎಂ ಪಾರ್ವತಿ ಅವರಿಗೆ ಮೈಸೂರಿನ ಹೆಚ್ಚು ಮೌಲ್ಯ ಹೊಂದಿರುವ ಪ್ರದೇಶದಲ್ಲಿ ಪರಿಹಾರದ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
Leave a Comment