
2 ಸಾವಿರ ಮುಖಬೆಲೆಯ ನೋಟುಗಳನ್ನು ಹಿಂಪಡೆದಿದ್ದೇಕೆ ಗೊತ್ತಾ? – ಮತ್ತೆ 1 ಸಾವಿರ ರೂಪಾಯಿ ನೋಟು ಚಾಲ್ತಿಗೆ ಬರುತ್ತಾ?
- ಹಣಕಾಸು
- May 25, 2023
- No Comment
- 148
ನ್ಯೂಸ್ ಆ್ಯರೋ : ಇತ್ತೀಚೆಗೆ ಆರ್‌ಬಿಐ 2 ಸಾವಿರ ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡುವುದಾಗಿ ಘೋಷಿಸಿದೆ. ಸೆ. 30ರ ವರೆಗೆ ನೋಟು ಬದಲಾಯಿಸಲು ಅವಕಾಶ ನೀಡಿದೆ. ಇದರ ಬೆನ್ನಲ್ಲೇ ಈ ಹಿಂದೆ ಬ್ಯಾನ್ ಆಗಿದ್ದ 1 ಸಾವಿರ ಮುಖಬೆಲೆಯ ನೋಟು ಮತ್ತೆ ಚಾಲ್ತಿಗೆ ಬರುತ್ತಿದೆ ಎನ್ನುವ ಸುದ್ದಿ ಹಬ್ಬಿದೆ. ಈ ಬಗ್ಗೆ ಸ್ಪಷ್ಟನೆ ನಿಡಿದ ಆರ್‌ಬಿಐ ಅಂತಹ ಸಾಧ್ಯತೆಯನ್ನು ತಳ್ಳಿ ಹಾಕಿದೆ.
ಆರ್‌ಬಿಐ ಗವರ್ನರ್ ಏನು ಹೇಳುತ್ತಾರೆ?
ನೋಟು ಹಿಂಪಡೆಯುವಿಕೆಯಿಂದ ಆರ್ಥಿಕ ನಷ್ಟ, ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಅಡಚಣೆ ಮುಂತಾದ ಸಮಸ್ಯೆ ಉಂಟಾಗುತ್ತದೆ ಎನ್ನುವ ರೀತಿಯ ಚರ್ಚೆ ನಡೆಯುತ್ತಿದೆ. ಇದು ಸತ್ಯಕ್ಕೆ ದೂರವಾದುದು. ಮುಖಬೆಲೆ ಕಮ್ಮಿಯಾದರೆ ವ್ಯವಹಾರಕ್ಕೆ ತೊಂದರೆಯಾಗುವುದಿಲ್ಲ. ನೋಟು ಹಿಂಪಡೆಯುವಿಕೆ ಆರ್ಥಿಕ ವ್ಯವಹಾರದ ಮೇಲೆ ದುಷ್ಪರಿಣಾಮ ಬೀರಲಾರದು. ಜನರ ವ್ಯವಹಾರಕ್ಕೆ ಮುಖಬೆಲೆ ಅಧಿಕ ಇರುವ ನೋಟಿನ ಅಗತ್ಯವೇ ಬೇಕೆಂದಿಲ್ಲ. ಹಾಗಾಗಿ ಸಾವಿರದ ನೋಟು ಪುನಃ ಚಾಲ್ತಿಗೆ ಬರುವುದಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿವರಿಸಿದ್ದಾರೆ.
2 ಸಾವಿರ ನೋಟಿನ ಪೈಕಿ ಬ್ಯಾಂಕ್ ನಲ್ಲಿ ಒಮ್ಮೆ 10 ನೋಟನ್ನು ಮಾತ್ರ ಕಾನೂನಾತ್ಮಕ ರೀತಿಯಲ್ಲಿ ಬದಲಾಯಿಸಬಹುದಾಗಿದ್ದು ಅದಕ್ಕಿಂತ ಹೆಚ್ಚಿನ ಹಣ ಇದ್ದವರು ಎಫ್.ಡಿ. ಮಾಡಿ ಉಳಿಸಿಕೊಳ್ಳಬಹುದು ಎಂದು ಆರ್‌ಬಿಐ ಸೂಚಿಸಿದೆ.
ನೋಟು ಹಿಂಪಡೆಯಲು ಕಾರಣವೇನು?
2 ಸಾವಿರ ಮುಖಬೆಲೆಯ ನೋಟುಗಳಲ್ಲಿ ಹೆಚ್ಚಿನವು ಮಾರ್ಚ್ 2017ಕ್ಕಿಂತ ಮೊದಲು ಬಿಡುಗಡೆಯಾಗಿವೆ. ಇತರ ಮುಖಬೆಲೆಯ ನೋಟುಗಳು ಪ್ರಸ್ತುತ ದೇಶದ ಜನರ ಅಗತ್ಯಗಳನ್ನು ಪೂರೈಸಲು ಸಾಕಾಗುತ್ತದೆ. ಈ ಕಾರಣಕ್ಕಾಗಿಯೇ 2 ಸಾವಿರ ಮುಖಬೆಲೆಯ ನೋಟುಗಳನ್ನು ‘ಕ್ಲೀನ್ ನೋಟ್ ಪಾಲಿಸಿ’ ಪ್ರಕಾರ ಚಲಾವಣೆಯಿಂದ ಹಿಂಪಡೆಯಲಾಗುತ್ತಿದೆ (ಗುಣಮಟ್ಟದ ನೋಟುಗಳನ್ನು ಚಲಾವಣೆಯಲ್ಲಿಡಲು ಆರ್‌ಬಿಐ ಅನುಸರಿಸುವ ನೀತಿಯೇ ‘ಕ್ಲೀನ್ ನೋಟ್ ಪಾಲಿಸಿ’). ಅಲ್ಲದೆ ಈಗ 2 ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ಶೇ. 10ರಷ್ಟು ಮಾತ್ರ ಇರುವುದರಿಂದ ಹೆಚ್ಚಿನ ಪರಿಣಾಮ ಬೀರದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ.
2024ರ ಚುನಾವಣಾ ಅಕ್ರಮಕ್ಕೆ ಬ್ರೇಕ್ ಹಾಕಲು ಕ್ರಮ?
ಮೂಲದ ಪ್ರಕಾರ 2024ರ ಸಾರ್ವತ್ರಿಕ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆಗಳನ್ನು ಆರಂಭಿಸಿದ್ದು, ಹೆಚ್ಚಿನ ಮುಖಬೆಲೆಯ ನೋಟುಗಳ ಸಂಗ್ರಹಣೆಗೆ ಮುಂದಾಗಿವೆ ಎಂದು ಹೇಳಲಾಗಿದೆ.
ಅನುಮಾನಾಸ್ಪದವಾಗಿ ಹೆಚ್ಚಿನ ಮುಖಬೆಲೆಯ ನೋಟುಗಳ ಸಂಗ್ರಹಣೆ ಮತ್ತು ದುರುಪಯೋಗವನ್ನು ತಪ್ಪಿಸಲು ಆರ್‌ಬಿಐ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.