
ಬ್ಯಾಂಕ್‌ಗಳಲ್ಲೂ ‘ಫೈವ್ ಡೇಸ್ ವರ್ಕಿಂಗ್’ ವ್ಯವಸ್ಥೆ ಜಾರಿಗೆ ಸಿದ್ಧತೆ – ಬ್ಯಾಂಕ್‌ಗಳ ಕಚೇರಿ ಅವಧಿಯಲ್ಲಿ ಬದಲಾವಣೆ ಸಾಧ್ಯತೆ
- ಹಣಕಾಸು
- March 4, 2023
- No Comment
- 110
ನ್ಯೂಸ್ ಆ್ಯರೋ : ಗ್ರಾಹಕರೇ ಗಮನಿಸಿ, ಇನ್ನು ಮುಂದೆ ಬ್ಯಾಂಕ್ ಬಾಗಿಲು ತೆರೆಯುವ ಮತ್ತು ಕ್ಲೋಸ್ ಆಗುವ ಸಮಯದಲ್ಲಿ ಬದಲಾವಣೆಯಾಗಲಿದೆ. ಮೂಲಗಳ ಪ್ರಕಾರ, ಇನ್ನು ಮುಂದೆ ಪ್ರತಿದಿನ ಬೆಳಿಗ್ಗೆ 9.45 ರಿಂದ ಸಂಜೆ 5ರವರೆಗೆ ಬ್ಯಾಂಕ್ ಕಾರ್ಯ ನಿರ್ವಹಿಸಲಿದೆ.
ಬ್ಯಾಂಕ್ ನೌಕರರು ಇನ್ನು ಮುಂದೆ 40 ನಿಮಿಷಗಳವರೆಗೆ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದಕ್ಕೆ ಬದಲಾಗಿ ಬ್ಯಾಂಕ್ ನೌಕರರಿಗೆ ವಾರಕ್ಕೆ ಎರಡು ದಿನಗಳ ರಜೆ ಸಿಗಲಿದೆ. ಅಂದರೆ, ಇನ್ನು ಮುಂದೆ ಪ್ರತಿ ಭಾನುವಾರದಂತೆ ಶನಿವಾರ ಕೂಡಾ ಬ್ಯಾಂಕ್ ಮುಚ್ಚಿರಲಿದೆ. ಈ ಬಗ್ಗೆ ಶೀಘ್ರವೇ ಘೋಷಣೆ ಹೊರ ಬೀಳುವ ಸಾಧ್ಯತೆ ಇದೆ.
ಬಹುದಿನಗಳ ಬೇಡಿಕೆ:
ಬ್ಯಾಂಕ್ ಉದ್ಯೋಗಿಗಳ ಬಹುದಿನಗಳ ಬೇಡಿಕೆ ಈಗ ಈಡೇರಲಿದೆ. ಬ್ಯಾಂಕ್ ಉದ್ಯೋಗಿಗಳಿಗೆ ವಾರದ ಐದು ದಿನಗಳ ಕೆಲಸ, ಎರಡು ದಿನ ವಾರದ ರಜೆ ಕೊಡಬೇಕು ಎಂಬುದು ಹಳೆಯ ಬೇಡಿಕೆ. ಈ ಬಗ್ಗೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (ಐಬಿಎ) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯೀಸ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತಿಂಗಳಿಗೆ ಎರಡು ರಜೆ ಹೆಚ್ಚಿರುವುದರಿಂದ ಬ್ಯಾಂಕ್ ನೌಕರರ ಕೆಲಸದ ಅವಧಿ ಕೂಡಾ ಹೆಚ್ಚಾಗಲಿದೆ.
ಹೊಸ ಒಪ್ಪಂದದ ಪ್ರಕಾರ ಬ್ಯಾಂಕ್ ಉದ್ಯೋಗಿಗಳು ಪ್ರತಿದಿನ 40 ನಿಮಿಷ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಪ್ರಸ್ತುತ ಭಾನುವಾರದ ಹೊರತಾಗಿ, ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಆದರೆ, ಮುಂಬರುವ ದಿನಗಳಲ್ಲಿ, ಪ್ರತಿ ಶನಿವಾರ ಮತ್ತು ಭಾನುವಾರದಂದು ಬ್ಯಾಂಕ್‌ಗಳ ಬಾಗಿಲು ಮುಚ್ಚಿರುತ್ತದೆ. ಈ ಬಗ್ಗೆ ಶೀಘ್ರದಲ್ಲೇ ಹೊಸ ವ್ಯವಸ್ಥೆ ಪ್ರಾರಂಭವಾಗಬಹುದು. ಈ ನಿಟ್ಟಿನಲ್ಲಿ ಸಂಘದಿಂದ ಒಪ್ಪಿಗೆ ಕೂಡಾ ನೀಡಲಾಗಿದೆ.
ಐದು ದಿನಗಳ ಕೆಲಸ :
2022ರಿಂದ ಎಲ್‌ಐಸಿಯಲ್ಲಿ ಫೈವ್ ಡೇಸ್ ವರ್ಕಿಂಗ್ ಎಂದು ಮಾಡಲಾಗಿದೆ. ಇದಾದ ಬಳಿಕ ಬ್ಯಾಂಕ್ ಯೂನಿಯನ್‌ಗಳಿಂದ ವಾರಕ್ಕೆ ಐದು ದಿನಗಳ ಕೆಲಸದ ಬೇಡಿಕೆ ತೀವ್ರಗೊಂಡಿತ್ತು. ಈ ಬಗ್ಗೆ ಮಾತನಾಡಿದ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಪ್ರಧಾನ ಕಾರ್ಯದರ್ಶಿ ಎಸ್ ನಾಗರಾಜನ್, ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ ಆಕ್ಟ್ ಸೆಕ್ಷನ್ 25 ರ ಅಡಿಯಲ್ಲಿ ಸರ್ಕಾರವು ಎಲ್ಲಾ ಶನಿವಾರದಂದು ರಜೆ ಎಂದು ಘೋಷಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ನೌಕರರು ಪ್ರತಿದಿನ ಬೆಳಿಗ್ಗೆ 9.45 ರಿಂದ ಸಂಜೆ 5.30 ರವರೆಗೆ 40 ನಿಮಿಷ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಈ ಪ್ರಸ್ತಾವಕ್ಕೆ ಐಬಿಎ ಒಪ್ಪಿಗೆ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.