
ಬ್ಯಾಂಕ್ ಉದ್ಯೋಗಿಗಳ ಬಹುದಿನದ ಬೇಡಿಕೆ ಈಡೇರುವ ಸಾಧ್ಯತೆ : ವಾರದಲ್ಲಿ 2 ದಿನ ರಜಾ ಭಾಗ್ಯ, ಉಳಿದ ದಿನ ಹೆಚ್ಚುವರಿ ಕೆಲಸದ ಒತ್ತಡ
- ಹಣಕಾಸು
- March 2, 2023
- No Comment
- 114
ನ್ಯೂಸ್ ಆ್ಯರೋ : ಬ್ಯಾಂಕ್ ಉದ್ಯೋಗಿಗಳು ವಾರದಲ್ಲಿ ಭಾನುವಾರದ ರಜೆ ಹಾಗೂ ತಿಂಗಳಲ್ಲಿ ಎರಡು ಶನಿವಾರದ ರಜೆ ಸೌಲಭ್ಯ ಹೊಂದಿದ್ದಾರೆ. ಈಗ ಹೊಸ ಸೌಲಭ್ಯ ಜಾರಿಯಾದಲ್ಲಿ ಭಾನುವಾರದ ಜೊತೆಗೆ ಶನಿವಾರವೂ ರಜಾ ದಿನವಾಗಿ ಪಡೆಯಲಿದ್ದಾರೆ.
ವಾರದಲ್ಲಿ ಎರಡು ದಿನ ವಾರದ ರಜೆ ಸಿಗಬೇಕೆಂಬ ಬ್ಯಾಂಕ್ ಉದ್ಯೋಗಿಗಳ ಬಹುದಿನದ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಬ್ಯಾಂಕ್ ಒಕ್ಕೂಟದ ಒತ್ತಾಯಕ್ಕೆ ಮಣಿದು ಭಾರತೀಯ ಬ್ಯಾಂಕುಗಳ ಸಂಘ ಐದು ದಿನಗಳ ವಾರದ ಕೆಲಸಕ್ಕೆ ಅನುಮೋದನೆ ಕೊಡಬಹುದು ಎಂದು ವರದಿಗಳು ಹೇಳುತ್ತಿವೆ. ಸದ್ಯ ಬ್ಯಾಂಕ್ ಉದ್ಯೋಗಿಗಳು ತಿಂಗಳಲ್ಲಿ ಪ್ರತಿ ಭಾನುವಾರ ಹಾಗೂ 2ನೇ ಹಾಗೂ 4ನೇ ಶನಿವಾರ ರಜೆ ಪಡೆಯುತ್ತಿದ್ದಾರೆ.
ವಾರದಲ್ಲಿ ಐದು ದಿನ ಕೆಲಸ ಮಾಡುವ ನಿಯಮ ಜಾರಿಗೆ ಬಂದಲ್ಲಿ ಬ್ಯಾಂಕ್ ಉದ್ಯೋಗಿಗಳು ಕೆಲಸದ ದಿನಗಳಲ್ಲಿ ಹೆಚ್ಚು ಹೊತ್ತು ಕೆಲಸ ಮಾಡಬೇಕಾಗಬಹುದು. ವರದಿಗಳ ಪ್ರಕಾರ, ಕೆಲಸದ ದಿನದಲ್ಲಿ 40 ಅಥವಾ 50 ನಿಮಿಷಗಳಷ್ಟು ಹೆಚ್ಚಿಗೆ ಕಾಲ ನೌಕರರು ಕೆಲಸ ಮಾಡಬೇಕೆನ್ನುವ ನಿಯಮ ರೂಪಿಸುವ ಸಾಧ್ಯತೆ ಇದೆ.
ಇಂಡಿಯನ್ ಬ್ಯಾಂಕ್ ಅಸೋಸಿಯೇಶನ್ ಈ ಪ್ರಸ್ತಾವ ರೂಪಿಸಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ಮತ್ತು ಆರ್ಬಿಐನಿಂದ ಈ ಪ್ರಸ್ತಾವಕ್ಕೆ ಅನುಮೋದನೆ ದೊರೆಯಬೇಕು. ಬಳಿಕ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದ ಬಳಿಕ ಬ್ಯಾಂಕ್ ನೌಕರರಿಗೆ ವಾರದಲ್ಲಿ ಭಾನುವಾರ ಮತ್ತು ಶನಿವಾರ ಎರಡು ದಿನಗಳು ರಜಾದಿನವಾಗಿ ಸಿಗುತ್ತವೆ.
ಬ್ಯಾಂಕ್ ಉದ್ಯೋಗಿಗಳಿಗೆ ಸಾಮಾನ್ಯವಾಗಿ ಬಹಳಷ್ಟು ಇತರೆ ರಜೆಗಳೂ ಲಭ್ಯವಾಗುತ್ತವೆ. ಸಾರ್ವತ್ರಿಕ ರಜೆಗಳ ಜೊತೆಗೆ ಪ್ರಾದೇಶಿಕ ರಜೆಗಳೂ ಅವರಿಗೆ ಸಿಗುತ್ತವೆ. ಈ ಮಾರ್ಚ್ ತಿಂಗಳಲ್ಲಿ ವಾರದ ರಜೆಯೂ ಸೇರಿ ಬ್ಯಾಂಕ್ ನೌಕರರಿಗೆ 12 ರಜಾ ದಿನಗಳಿವೆ.