
‘ಸಾವರಿನ್ ಗೋಲ್ಡ್ ಬಾಂಡ್’ ಹೂಡಿಕೆಯಿಂದ ಭರಪೂರ ಲಾಭ – ಏನಿದು ಸಾವರಿನ್ ಗೋಲ್ಡ್ ಬಾಂಡ್ ಯೋಜನೆ? ಬಡ್ಡಿ ಎಷ್ಟು? ಹೂಡಿಕೆ ಹೇಗೆ? ವಿವರ ಇಲ್ಲಿದೆ..
- ಹಣಕಾಸು
- June 23, 2023
- No Comment
- 163
ನ್ಯೂಸ್ ಆ್ಯರೋ : ಸುರಕ್ಷಿತ ರೀತಿಯಲ್ಲಿ ಹಣ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಉತ್ತಮ ಆಯ್ಕೆಯಾಗಿದೆ. ಚಿನ್ನದ ನಗದೀಕರಣಕ್ಕಾಗಿ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಚಿನ್ನದ ಖರೀದಿಗೆ ಬದಲಿ ಸೌಲಭ್ಯ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೇಂದ್ರ ಸರಕಾರದ ಪರವಾಗಿ ಗೋಲ್ಡ್ ಬಾಂಡ್‌ಗಳನ್ನು ವಿತರಿಸುತ್ತಿದ್ದು, ಈ ಯೋಜನೆಯು ಭೌತಿಕ ಚಿನ್ನದ ಬೇಡಿಕೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ. ಇದರಿಂದಾಗಿ ಭಾರತದಲ್ಲಿ ಚಿನ್ನದ ಆಮದುಗಳ ಮೇಲೆ ನಿಯಂತ್ರಣ ತರಬಹುದು ಎಂಬುದು ಕೇಂದ್ರ ಉದ್ದೇಶವಾಗಿದ್ದು, ಈ ಬಾಂಡ್‌ಗಳು ಭೌತಿಕ ಚಿನ್ನದಷ್ಟೇ ಪ್ರಯೋಜನ ನೀಡುತ್ತದೆ. ಗೋಲ್ಡ್ ಬಾಂಡ್‌ನ ಮೌಲ್ಯವು ಚಿನ್ನದ ದರಕ್ಕೆ ಅನುಗುಣವಾಗಿ ಹೆಚ್ಚಾಗುತ್ತಿದ್ದು, ಹೂಡಿಕೆದಾರರು ಈ ಬಾಂಡ್‌ಗಳನ್ನು ನಗದು ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.
ಇದೀಗ ಚಿನ್ನದ ಮೇಲೆ ಹೂಡಿಕೆ ಮಾಡಲು ಜನಸಾಮಾನ್ಯರಿಗೆ ಮತ್ತೊಂದು ಸುವರ್ಣಾವಕಾಶ ತೆರೆದಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಪ್ರಸ್ತುತ 2023-24ನೇ ಸಾಲಿನ ಮೊದಲ ಸರಣಿಯ ‘ಸಾವರಿನ್ ಗೋಲ್ಡ್ ಬಾಂಡ್’ (ಎಸ್‌ಜಿಬಿ) ಗಳನ್ನು ಜೂ.19ರಂದು ಬಿಡುಗಡೆ ಮಾಡಿದ್ದು, ಜೂ.23ರವರೆಗೆ ಒಟ್ಟು 5 ದಿನಗಳ ಕಾಲ ಸಾವರಿನ್ ಬಾಂಡ್‌ಗಳ ನೋದಣಿಗೆ ಅವಕಾಶವಿದೆ.
ಈ ಬಾರಿ ಸಾವರಿನ್ ಗೋಲ್ಡ್ ಬಾಂಡ್ ವಿತರಣೆ ಬೆಲೆಯನ್ನು ಪ್ರತಿ ಗ್ರಾಂಗೆ 5,926ರೂ. ನಿಗದಿಪಡಿಸಲಾಗಿದ್ದು, ಆನ್ ಲೈನ್ ನಲ್ಲಿ ಖರೀದಿಸಿದ್ರೆ 50ರೂ. ಡಿಸ್ಕೌಂಟ್ ಕೂಡ ಸಿಗಲಿದೆ. ಅಂದರೆ ನೀವು 10ಗ್ರಾಂ ಚಿನ್ನ ಖರೀದಿಸಿದರೆ 500ರೂ. ಡಿಸ್ಕೌಂಟ್ ಸಿಗಲಿದೆ.
ಹಾಗಾದ್ರೆ ಸಾವರಿನ್ ಗೋಲ್ಡ್ ಬಾಂಡ್‌ಗಳ ನೋಂದಣಿ ಹೇಗೆ? ಬಡ್ಡಿ ಎಷ್ಟು ಮೊದಲಾದ ಮಾಹಿತಿ ಇಲ್ಲಿದೆ.
ಬಾಂಡ್‌ಗಳನ್ನು ಯಾರು ವಿತರಿಸುತ್ತಾರೆ?
ಸಾವರಿನ್ ಗೋಲ್ಡ್ ಬಾಂಡ್‌ಗಳನ್ನು ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಿತರಿಸುತ್ತದೆ. ಇದರಲ್ಲಿ ಪ್ರತಿ ಬಾಂಡ್ ಒಂದು ಗ್ರಾಂ ಚಿನ್ನಕ್ಕೆ ಸಮಾನವಾದ ಮೌಲ್ಯವನ್ನು ಪ್ರತಿನಿಧಿಸುತ್ತದೆ. ಈ ಯೋಜನೆಯಡಿ ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಕನಿಷ್ಠ 1 ಗ್ರಾಂ. ನಿಂದ 500 ಗ್ರಾಂ ಚಿನ್ನವನ್ನು ಹೂಡಿಕೆ ಮಾಡಬಹುದು. ಗೋಲ್ಡ್ ಬಾಂಡ್ ಯೋಜನೆಯು ಡಿಮ್ಯಾಟ್ ಮತ್ತು ಪೇಪರ್ ರೂಪದಲ್ಲಿ ಲಭ್ಯವಿದ್ದು ಬಾಂಡ್‌ಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ಗಳ ಮೂಲಕವೂ ವ್ಯಾಪಾರ ಮಾಡಬಹುದು. ಇನ್ನೂ ಕೊರೊನಾ ವೈರಸ್‌ನಿಂದಾಗಿ ಎಲ್ಲ ಕ್ಷೇತ್ರಗಳೂ ನಷ್ಟ ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚು ಸುರಕ್ಷಿತವಾಗಿದೆ.
ಬಡ್ಡಿ ಎಷ್ಟು?
ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಡಿ ನಿಮ್ಮ ಹೂಡಿಕೆಯ ಮೊತ್ತಕ್ಕೆ ವಾರ್ಷಿಕ ಶೇ.2.5 ಬಡ್ಡಿ ನೀಡಲಾಗುತ್ತದೆ. ಬಡ್ಡಿಯನ್ನು 6 ತಿಂಗಳಿಗೆ ಒಮ್ಮೆ ಪಾವತಿಸಲಾಗುತ್ತದೆ. ಈ ಯೋಜನೆಯಲ್ಲಿ ಕ್ಯಾಪಿಟಲ್ ಗೇನ್ಸ್ ತೆರಿಗೆ ವಿನಾಯಿತಿಯೂ ಲಭ್ಯವಿದೆ. ಈ ಯೋಜನೆಯಡಿ ಚಿನ್ನವನ್ನು ಖರೀದಿಸಲು ಯಾವುದೇ ಜಿಎಸ್‌ಟಿ ಮತ್ತು ಮೇಕಿಂಗ್ ಶುಲ್ಕಗಳನ್ನು ವಿಧಿಸಲಾಗೋದಿಲ್ಲ.
ಯಾರು ಖರೀದಿಸಬಹುದು? ಎಷ್ಟು ಖರೀದಿಸಬಹುದು?
ವೈಯಕ್ತಿಕವಾಗಿ ಅಥವಾ ಹಿಂದೂ ಅವಿಭಕ್ತ ಕುಟುಂಬಗಳು ವಾರ್ಷಿಕ ಗರಿಷ್ಠ 4 ಕೆಜಿ ಮೌಲ್ಯದ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದು. ಇನ್ನು ಟ್ರಸ್ಟ್ ಗಳು, ಇದಕ್ಕೆ ಸರಿಸಮಾನವಾದ ಸಂಸ್ಥೆಗಳು ಒಂದು ವಿತ್ತೀಯ ವರ್ಷದಲ್ಲಿ ಗರಿಷ್ಠ 20 ಕೆಜಿ ಮೌಲ್ಯದ ಎಸ್‌ಜಿಬಿ ಖರೀದಿಸಬಹುದು. ಒಬ್ಬ ವ್ಯಕ್ತಿ ಕನಿಷ್ಠ 1 ಬಾಂಡ್ ಕೊಳ್ಳಬೇಕು. ಇದು 8 ವರ್ಷದ ಅನಂತರ ಕೈಗೆ ಸಿಗುತ್ತದೆ. ಬಯಸಿದರೆ ಈ ಯೋಜನೆಯನ್ನು 5 ವರ್ಷಕ್ಕೇ ಮುಗಿಸಿಕೊಳ್ಳಬಹುದು.
ಎಲ್ಲಿ ಖರೀದಿಸಬಹುದು?
ವಾಣಿಜ್ಯ ಬ್ಯಾಂಕ್‌ಗಳು, ಅಂಚೆ ಕಚೇರಿ, ಬಿಎಸ್‌ಇ, ಎನ್‌ಎಸ್‌ಇ ಮತ್ತು ನ್ಯಾಷನಲ್ ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್‌ನಲ್ಲಿ ಎಸ್‌ಜಿಬಿಗಳನ್ನು ಕೊಳ್ಳಬಹುದು. ವ್ಯಕ್ತಿಗತವಾಗಿ, ಟ್ರಸ್ಟ್‌ಗಳು, ಸಾಮಾಜಿಕ ಸಂಘಟನೆಗಳು, ಅವಿಭಕ್ತ ಹಿಂದು ಕುಟುಂಬಗಳು, ವಿಶ್ವವಿದ್ಯಾಲಯಗಳಿಗೆ ಕೊಳ್ಳುವ ಅವಕಾಶವಿದೆ. ಬಾಂಡ್‌ಗಳನ್ನು ಕೊಳ್ಳಲು ಆರ್‌ಬಿಐ ನಿರ್ದೇಶನದ ಪ್ರಕಾರ, ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಚಿನ್ನದ ಮೌಲ್ಯ ನಿಗದಿ ಹೇಗೆ?
ಭಾರತೀಯ ಷೇರುಪೇಟೆ ಹಾಗೂ ಶುದ್ಧ ಚಿನ್ನದ ಆಭರಣ ವರ್ತಕರು (ಜುವೆಲರ್ಸ್ ಅಸೋಸಿಯೇಶನ್ ಲಿಮಿಟೆಡ್) ನಿಗದಿಪಡಿಸಿದ ಬೆಲೆಯ ಪ್ರಕಾರ ಬಾಂಡ್‌ಗಳನ್ನು ವಿತರಿಸಲಾಗುವುದು. ಅಂದರೆ ಚಿನಿವಾರ ಪೇಟೆ ಕಾರ್ಯಾಚರಣೆ ಮಾಡುತ್ತಿರುವಾಗಿನ (ರಜಾದಿನಗಳನ್ನು ಬಿಟ್ಟು) ಕೊನೆಯ ಮೂರು ದಿನಗಳ ಸರಾಸರಿ ಬೆಲೆಯನ್ನು ನಿಗದಿ ಮಾಡಲಾಗುವುದು.
ಡಿಜಿಟಲ್ ಅರ್ಜಿ ಸಲ್ಲಿಸಿದರೆ ರಿಯಾಯಿತಿ
ನೀವು ಸಾವರಿನ್ ಗೋಲ್ಡ್ ಬಾಂಡ್ ಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ಡಿಜಿಟಲ್ ಚಂದಾದಾರಿಕೆಯ ಮೇಲೆ ರಿಸರ್ವ್ ಬ್ಯಾಂಕ್ ಪ್ರತಿ ಗ್ರಾಂಗೆ 50 ರೂ.ಗಳ ರಿಯಾಯಿತಿಯನ್ನು ನೀಡುತ್ತಿದೆ. ಹೀಗಾಗಿ ನೀವು ಡಿಜಿಟಲ್ ರೂಪದಲ್ಲಿ ಖರೀದಿಸುವುದು ಉತ್ತಮ. ಇಲ್ಲಿ ಪ್ರತಿ ಗ್ರಾಂಗೆ 4736 ರೂ. ದರದಲ್ಲಿ ನೀವು ಆನ್‌ಲೈನ್‌ನಲ್ಲಿ ಚಿನ್ನವನ್ನು ಖರೀದಿಸಬಹುದು.
ಆನ್‌ಲೈನ್‌ನಲ್ಲಿ ಹೂಡಿಕೆ ಮಾಡುವುದು ಹೇಗೆ?
ಎನ್ಎಸ್ಇ (ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್) ನಲ್ಲಿ ಚಿನ್ನದ ಬಾಂಡ್‌ಗಳ ಘಟಕಗಳನ್ನು ಖರೀದಿಸಿ ಮತ್ತು ಅದರ ಮೌಲ್ಯಕ್ಕೆ ಸಮನಾದ ಮೊತ್ತವನ್ನು ನಿಮ್ಮ ಡಿಮ್ಯಾಟ್ ಖಾತೆಗೆ ಲಿಂಕ್ ಮಾಡಲಾದ ಖಾತೆಯಿಂದ ಕಡಿತಗೊಳಿಸಲಾಗುತ್ತದೆ.