ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಮೊಹಮ್ಮದ್ ಸಿರಾಜ್; ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ರಾ ಟೀಂ ಇಂಡಿಯಾ ವೇಗಿ
ನ್ಯೂಸ್ ಆ್ಯರೋ: ಟೀಂ ಇಂಡಿಯಾ ಮಾರಕ ವೇಗಿ ಹಾಗೂ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ಮೊಹಮ್ಮದ್ ಸಿರಾಜ್, ಇದೀಗ ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ತೆಲಂಗಾಣದ ಡೈರೆಕ್ಟರ್ ಜನರಲ್ ಆಫ್ ಪೊಲೀಸ್(ಡಿಜಿಪಿ) ಅವರಿಂದ ಸಿರಾಜ್ ಡಿಸಿಪಿಯಾಗಿ ಚಾರ್ಜ್ ಪಡೆದುಕೊಂಡಿದ್ದಾರೆ.
ಕಳೆದ ಆಗಸ್ಟ್ 02ರಂದು ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಬಾಕ್ಸರ್ ನಿಖಾತ್ ಝರೀನ್ ಹಾಗೂ ಕ್ರಿಕೆಟರ್ ಮೊಹಮ್ಮದ್ ಸಿರಾಜ್‌ಗೆ ತಮ್ಮ ತಮ್ಮ ಕ್ಷೇತ್ರದಲ್ಲಿನ ಸಾಧನೆಯನ್ನು ಪರಿಗಣಿಸಿ ಗ್ರೂಪ್ 1 ದರ್ಜೆಯ ಹುದ್ದೆ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಇಂದು ಸಿರಾಜ್, ಡಿಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್‌ಗೆ ಸಂಸದ ಎಂ ಅನಿಲ್ ಕುಮಾರ್ ಯಾದವ್, ಮತ್ತೋರ್ವ ಸಂಸದ ಮೊಹಮ್ಮದ್ ಫಾಹೀಮುದ್ದೀನ್ ಖುರೇಶಿ ಹಾಜರಿದ್ದರು.
ಈ ಕುರಿತಂತೆ ಟ್ವೀಟ್ ಮಾಡಿರುವ ತೆಲಂಗಾಣ ಪೊಲೀಸರು, “ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್, ತೆಲಂಗಾಣದ ಡಿಎಸ್‌ಪಿಯಾಗಿ ನೇಮಕವಾಗಿದ್ದಾರೆ. ಅವರು ಕ್ರಿಕೆಟ್‌ನಲ್ಲಿ ತೋರಿದ ಸಾಧನೆ ಹಾಗೂ ನಮ್ಮ ರಾಜ್ಯವು ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಕ್ಕಾಗಿ ಈ ಗೌರವ ನೀಡಲಾಗಿದೆ. ಅವರು ಕ್ರಿಕೆಟಿಗರಾಗಿ ಮುಂದುವರೆಯಲಿದ್ದು, ಈ ಹೊಸ ಪಾತ್ರದ ಮೂಲಕ ಹಲವರಿಗೆ ಸ್ಪೂರ್ತಿಯಾಗಲಿದ್ದಾರೆ” ಎಂದು ಶುಭ ಹಾರೈಸಿದೆ.
ಇನ್ನು ಇದೇ ವೇಳೆ ಮೊಹಮ್ಮದ್ ಸಿರಾಜ್ ಕೂಡಾ, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Leave a Comment