ಹಿರಿಯ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್; ಎಂಬಿಬಿಎಸ್ ವಿದ್ಯಾರ್ಥಿ ಸಾವು
ನ್ಯೂಸ್ ಆ್ಯರೋ: ಹಿರಿಯ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್‌ಗೆ ಗುರಿಯಾಗಿ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಗುಜರಾತ್ನ ಪಟಾನ್ನಲ್ಲಿ ನಡೆದಿದೆ. ಅನಿಲ್ ನಟವರ್ಭಾಯಿ ಮೆಥಾನಿಯಾ (18) ಸಾವನ್ನಪ್ಪಿದವರು. ಪಟಾನ್ ಜಿಲ್ಲೆಯ ಧರ್ಪುರ್ ಪ್ರದೇಶದ ಜಿಎಂಇಆರ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಘಟನೆ ನಡೆದಿದೆ.
ನವೆಂಬರ್ 16ರ ಶನಿವಾರ ರಾತ್ರಿ ಹಿರಿಯ ವಿದ್ಯಾರ್ಥಿಗಳು ಅನಿಲ್ ಸೇರಿದಂತೆ ಹಲವರನ್ನು 3 ಗಂಟೆಗಳ ಕಾಲ ನಿಂತುಕೊಳ್ಳುವಂತೆ ರ‍್ಯಾಗಿಂಗ್ ಮಾಡಿದ್ದರು. ಮೂರು ಗಂಟೆ ಒಂದೇ ಕಡೆ ನಿಂತಿದ್ದ ಅನಿಲ್ ಕುಸಿದುಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ಕಾಲೇಜಿನ ಡೀನ್ ಹರ್ದಿಕ್ ಶಾ ತಿಳಿಸಿದ್ದಾರೆ.
ಈ ಕುರಿತು ‘ಪಿಟಿಐ’ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಓರ್ವ ಸಹಪಾಠಿ, “ಕಾಲೇಜಿಗೆ ಹೊಸದಾಗಿ ಪ್ರವೇಶ ಪಡೆದ 11 ಜೂನಿಯರ್ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳುವ ಮುನ್ನ ಸೀನಿಯರ್ ವಿದ್ಯಾರ್ಥಿಗಳು ಎಲ್ಲಿಯೂ ಅಲುಗಾಡದಂತೆ ಬಲವಂತವಾಗಿ ಒಂದೇ ಕಡೆ ನಿಲ್ಲುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಅನಿಲ್ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ” ಎಂದು ಹೇಳಿದರು.
“ಎಂಟು ಮಂದಿ ಹಿರಿಯ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ದಾಖಲಾಗಿದ್ದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಒಬ್ಬರ ನಂತರ ಒಬ್ಬರಂತೆ ಪರಿಚಯಿಸಿಕೊಳ್ಳುವಂತೆ ಹೇಳಿ ಮೂರು ಗಂಟೆ ಬಲವಂತವಾಗಿ ನಿಲ್ಲಿಸಿದರು. ನನ್ನ ಜೊತೆ ಅನಿಲ್ ಕೂಡ ನಿಂತಿದ್ದರು. ಅವರು ತುಂಬಾ ಹೊತ್ತಿನ ಬಳಿಕ ಕುಸಿದು ಬಿದ್ದರು” ಎಂದು ಮೊದಲ ವರ್ಷದ ವೈದ್ಯಕೀಯ ವಿದ್ಯಾರ್ಥಿ ಹೇಳಿದರು.
ಅನಿಲ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬರಬೇಕಿದೆ. ರಾಜ್ಯ ಸರ್ಕಾರ ಮತ್ತು ಕಾಲೇಜು ನಮಗೆ ನ್ಯಾಯ ಒದಗಿಸಬೇಕು ಎಂದು ಮೃತ ವಿದ್ಯಾರ್ಥಿ ಕುಟುಂಬಸ್ಥರು ಆಗ್ರಹಿಸಿದ್ದಾರೆ.ರ‍್ಯಾಗಿಂಗ್ ವಿರೋಧಿ ಸಮಿತಿ ಘಟನೆಯ ತನಿಖೆ ನಡೆಸುತ್ತಿದೆ. ಹಿರಿಯ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ತಿಳಿಸಿದೆ.
Leave a Comment