ಸ್ವಾತಂತ್ರ್ಯ ದಿನದಂದು ಸಿಹಿತಿಂಡಿ ನೀಡದ್ದಕ್ಕೆ ಶಾಲೆಯಲ್ಲಿ ಗಲಾಟೆ – ಶಿಕ್ಷಕರಿಗೆ ಹಿಗ್ಗಾಮುಗ್ಗಾ ಥಳಿಸಿದ ವಿದ್ಯಾರ್ಥಿಗಳು : ಪ್ರಕರಣ ದಾಖಲು

ನ್ಯೂಸ್ ಆ್ಯರೋ : ಸ್ವಾತಂತ್ರ್ಯೋತ್ಸವ ಆಚರಣೆ ಬಳಿಕ ಜಿಲೇಬಿ ಸಿಗದಿದ್ದಕ್ಕೆ ಕೋಪಗೊಂಡ ವಿದ್ಯಾರ್ಥಿಗಳು ಶಿಕ್ಷಕರಿಗೆ ಥಳಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಶಾಲೆಯಿಂದ ಮನೆಯತ್ತ ಹೊರಟ ಶಿಕ್ಷಕರನ್ನು ತಡೆದ ವಿದ್ಯಾರ್ಥಿಗಳು ಮೊದಲಿಗೆ ಶಿಕ್ಷಕರಿಗೆ ಜಿಲೇಬಿ ಯಾಕೆ ಸಿಗಲಿಲ್ಲ ಎನ್ನುವ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ನಂತರ ವಿವಾದವು ಉಲ್ಬಣಗೊಂಡು ವಿದ್ಯಾರ್ಥಿಗಳು ಶಿಕ್ಷಕರನ್ನು ಥಳಿಸಿದ್ದಾರೆ ಎನ್ನಲಾಗಿದೆ.
ಬಿಹಾರದ ಬಕ್ಸಾರ್ ನಲ್ಲಿರುವ ಮುರಾರ್‌ನ ಇಂಟರ್ ಲೆವೆಲ್ ಹೈಸ್ಕೂಲ್‌ನಲ್ಲಿ ಜಲೇಬಿ ವಿಚಾರವಾಗಿ ಭಾರೀ ಗಲಾಟೆ ನಡೆದಿದೆ. 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಜಲೇಬಿ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಶಿಕ್ಷಕರಿಗೆ ಥಳಿಸಿದ್ದಾರೆ. ಜಲೇಬಿ ವಿಚಾರವಾಗಿ ಕೋಲಾಹಲ ಎದ್ದಿರುವ ಈ ಸುದ್ದಿ ಇಡೀ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪ್ರತಿ ವರ್ಷ ಆಗಸ್ಟ್ 15 ಮತ್ತು ಜನವರಿ 26ರಂದು ಶಾಲಾ ವಿದ್ಯಾರ್ಥಿಗಳ ಹೊರತಾಗಿ ಹಳ್ಳಿಯ ಮಕ್ಕಳು ಕೂಡಾ ಶಾಲೆಯಲ್ಲಿ ಸೇರುತ್ತಾರೆ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಈ ಬಾರಿ ಅವರ ಸಂಖ್ಯೆ ಹೆಚ್ಚಿದ್ದರಿಂದ ಸಿಹಿ ತಿಂಡಿ ಕಡಿಮೆ ಆಗಿತ್ತು ಎನ್ನಲಾಗಿದೆ.
ಇದರಿಂದ ಕೆರಳಿದ ಹಳ್ಳಿಯ ಮಕ್ಕಳ ಜೊತೆ ಸೇರಿದ ವಿದ್ಯಾರ್ಥಿಗಳು ಶಿಕ್ಷಕರನ್ನು ನಿಂದಿಸಿ ಅಟ್ಟಾಡಿಸಿಕೊಂಡು ಹೋಗಲು ಆರಂಭಿಸಿದ್ದಾರೆ. ನಂತರ ಗಲಾಟೆ ಆರಂಭವಾಗಿ ಹೊಡೆದಾಟ ಆರಂಭವಾಯಿತು ಎನ್ನಲಾಗಿದೆ.
ಈ ಹೊಡೆದಾಟದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯ ನಂತರ ಕೋಪಗೊಂಡ ಶಿಕ್ಷಕರು ಪೊಲೀಸ್ ಠಾಣೆಗೆ ಆಗಮಿಸಿ ವಿದ್ಯಾರ್ಥಿಗಳ ವಿರುದ್ಧ ದೂರು ನೀಡಿದ್ದು ಪೋಲಿಸರು ವಿದ್ಯಾರ್ಥಿಗಳ ಬೆನ್ನು ಬಿದ್ದಿದ್ದಾರೆ.
Leave a Comment