ತೆಂಗಿನ ಚಿಪ್ಪಿನಿಂದಲೇ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಾಳೆ ಈ ಯುವತಿ – ತೆಂಗಿನ‌ ಚಿಪ್ಪಿನಲ್ಲಿ ಅಂತಹದ್ದೇನಿದೆ ಗೊತ್ತಾ?

ನ್ಯೂಸ್ ಆ್ಯರೋ : ತೆಂಗಿನ ಮರದ ಬೇರಿನಿಂದ ಹಿಡಿದು ಗರಿಯ ತನಕ ಎಲ್ಲವೂ ಕೂಡ ಉಪಯೋಗವಾಗುತ್ತದೆ ಇದೇ ಕಾರಣದಿಂದ ಈ ಮರವನ್ನು ‘ಕಲ್ಪವೃಕ್ಷ’ ಎಂದು ಕರೆಯುತ್ತಾರೆ. ಸದ್ಯ, ಈ ಕಲ್ಪವೃಕ್ಷದ ಚಿಪ್ಪನ್ನು ಬಳಸಿಕೊಂಡು ಕೇರಳದ ಮೂಲದ ಯುವತಿಯೊಬ್ಬಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾಳೆ.

ಸಾಧಿಸಲು ಹೊರಟರೆ ಯಾವುದು ಕೂಡ ಅಸಾಧ್ಯವಲ್ಲ ಎಂಬ ಮಾತಿಗೆ ಕೇರಳದ ಯುವತಿ ಮಾರಿಯಾ ಕುರಿಯಕೋಸ್ ಸಾಕ್ಷಿಯಾಗಿದ್ದಾಳೆ. ಹಾಗಿದ್ದರೆ ಈ ಯುವತಿಯ ಸಾಧನೆಯೇನು? ತೆಂಗಿನ ಚಿಪ್ಪಿನಲ್ಲಿ ಅಂತಹದ್ದೇನಿದೆ? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಯಾರು ಈ ಮಾರಿಯಾ ಕುರಿಯಕೋಸ್?

ಕೇರಳ ರಾಜ್ಯವನ್ನು ತೆಂಗಿನಕಾಯಿಗಳ ನಾಡು ಎಂದೇ ಕರೆಯಲಾಗುತ್ತದೆ. ಭಾರತದಲ್ಲಿ ಅತಿ ಹೆಚ್ಚು ತೆಂಗಿನಕಾಯಿ ಬೆಳೆಯುವ ರಾಜ್ಯ ಕೇರಳ. ಇಂತಹಾ ರಾಜ್ಯದಲ್ಲಿ ಹುಟ್ಟಿದ ಮಾರಿಯಾ ಕುರಿಯಾಕೋಸ್ ಕೇರಳದಲ್ಲೇ ಶಿಕ್ಷಣ ಪಡೆದು ಮುಂದೆ ಉನ್ನತ ಶಿಕ್ಷಣಕ್ಕಾಗಿ ಮುಂಬೈಗೆ ತೆರಳಿ ಅಲ್ಲೇ ಉದ್ಯೋಗ ಪಡೆದರು. ಆದರೆ ಬಾಲ್ಯದಿಂದಲೇ ಸ್ವಂತ ಉದ್ಯಮ‌ ಸ್ಥಾಪಿಸಬೇಕು ಎಂಬ ಕನಸು ಹೊತ್ತಿದ್ದ ಈಕೆಗೆ ಹೆಚ್ಚು ಸಮಯ ಮುಂಬೈನಲ್ಲಿ ಉಳಿಯಲಾಗಲಿಲ್ಲ. ಇದರಿಂದಾಗ ಉದ್ಯೋಗ ಬಿಟ್ಟು, ಉದ್ಯಮ ಸ್ಥಾಪಿಸಲು ಕೇರಳಕ್ಕೆ ವಾಪಾಸಾದರು.

ಯಾವ ಉದ್ಯಮ ಸ್ಥಾಪಿಸುವುದು ಎಂದು ಯೋಚಿಸುತ್ತಿದ್ದಾಗಲೇ ಮಾರಿಯಾ ಕಣ್ಣಿಗೆ ಕಾಣಿಸಿದ್ದು, ಉಪಯೋಗಿಸಿ ಎಸೆದ ತೆಂಗಿನಕಾಯಿ ಚಿಪ್ಪು.

ಕಂಪೆನಿ ಕಟ್ಟಿಯೇ ಬಿಟ್ಟಳು ಮಾರಿಯಾ!

ಮುಂಬೈನಿಂದ ಊರಿಗೆ ಮರಳಿದ ಮಾರಿಯಾ ತನ್ನ ರಾಜ್ಯದ ಕೃಷಿ ಕ್ಷೇತ್ರಕ್ಕೆ ಬೆಂಬಲ ನೀಡುವಂತಹ ಉದ್ಯಮ ಸ್ಥಾಪಿಸಲು ನಿರ್ಧರಿಸಿದರು. ಇದೇ ವೇಳೆ ತೆಂಗಿನಕಾರಿ ಫ್ಯಾಕ್ಟರಿಗಳಿಗೆ ಭೇಟಿ ನೀಡಿ ಅಲ್ಲಿ ಚಿಪ್ಪುಗಳನ್ನು ಸುಡುವುದು ಹಾಗೂ ಎಸೆಯುವುದನ್ನು ಕಂಡು ಅದರಿಂದಲೇ ಏನನ್ನಾದರೂ ತಯಾರಿಸಬೇಕು ಎಂದು ಚಿಂತಿಸಿದರು.

ಇದೇ ಚಿಂತನೆಯೊಂದಿಗೆ ಆರಂಭವಾದ ಕಂಪೆನಿಯೇ ‘ಥೇಂಗಾ ಕೊಕೊ’. 2019ರಲ್ಲಿ ಮಾರಿಯಾ ತನ್ನದೇ ಆದ ಸ್ವಂತ ಕಂಪೆನಿಯನ್ನು ಸ್ಥಾಪಿಸಿದರು.

ತಿಂಗಳಿಗೆ 7 ಲಕ್ಷ ಆದಾಯ!

‘ಥೇಂಗಾ ಕೊಕೊ’ ಸಂಸ್ಥೆ ಆರಂಭಿಸಿದ ಮಾರಿಯಾ ತೆಂಗಿನ‌ ಹೊಟ್ಟು ಹಾಗೂ ಚಿಪ್ಪುಗಳನ್ನು‌ ಬಳಸಿ ಜನೋಪಯೋಗಿ ವಸ್ತುಗಳನ್ನು ತಯಾರಿಸಲು ನಿರ್ಧಾರಿಸಿದರು. ಇವುಗಳನ್ನು‌ ಬಳಸಿ ಕಪ್ ಗಳು, ಸಾಸರ್ ಗಳು, ಸಾಬೂನು ಹೋಲ್ಡರ್ ಮತ್ತು ಕಟ್ಲರಿಗಳಂತಹ ಪ್ರಾಯೋಗಿಕ ವಸ್ತುಗಳ ಮೇಲೆ ಕೇಂದ್ರೀಕರಿಸಲು ಮರಿಯಾ ನಿರ್ಧರಿಸಿದರು.

ಇದಕ್ಕಾಗಿ ಹಲವು ಕುಶಲ ಕರ್ಮಿಗಳನ್ನು ಸಂಪರ್ಕಿಸಿ ಪಳಗಿದರು. ಪ್ರಾರಂಭವಾದ ವರ್ಷಗಳಿಂದ ಮಾರಿಯಾ ಅವರ ಪರಿಸರ ಪ್ರಜ್ಞೆಯ ಸ್ಟಾರ್ಟ್ಅಪ್ ಥೆಂಗಾ ಕೊಕೊ ಈಗ ಪ್ರತಿ ತಿಂಗಳು 4,000 ರಿಂದ 5,000 ತೆಂಗಿನ ಚಿಪ್ಪು ಉತ್ಪನ್ನಗಳನ್ನು ಮಾರುತ್ತಿದ್ದು,ಸದ್ಯ, ಮರಿಯಾ ತಿಂಗಳಿಗೆ 7-8 ಲಕ್ಷ ರೂ.ಗಳ ಆದಾಯ ಗಳಿಸುತ್ತಿದ್ದಾರೆ.

ಸದ್ಯ, ಮರಿಯಾ ಅವರ ‘ಥೆಂಗಾ ಕೊಕೊ’ ಭಾರೀ ಮನ್ನಣೆ ಗಳಿಸುತ್ತಿದ್ದು. ದೇಶ ಮಾತ್ರದಲ್ಲದೇ ವಿಶ್ವದಾದ್ಯಂತ ಇವರ ಸಂಸ್ಥೆಯ ವಸ್ತುಗಳಿಗೆ ಬೇಡಿಕೆಯಿದೆ. ಕಂಪೆನಿ ಸ್ಥಾಪಿಸಿದ ಸಮಯದಲ್ಲಿ ಹಗಲಿರುಳು ಶ್ರಮಿಸಿ, ಸವಾಲುಗಳನ್ನು ಮೀರಿ ಸಾಧನೆ ಮಾಡಿದ ಮರಿಯಾ ಅವರು ಸದ್ಯ, ತಮ್ಮ ಸ್ವಂತ ಉದ್ಯಮದಿಂದ ನೂರಾರು ಜನರಿಗೆ ಉದ್ಯೋಗ ನೀಡುವುದರೊಂದಿಗೆ, ಲಕ್ಷಾಂತರ ಆದಾಯ ಗಳಿಸುತ್ತಿದ್ದಾರೆ.