Then a hotel waiter, now the owner of two and a half thousand crores!

7ನೇ ಕ್ಲಾಸ್ ಫೇಲ್ ಆಗಿದ್ದ ಈ ನಟ 2,500 ಕೋಟಿ ಆಸ್ತಿ ಒಡೆಯ‌ – ಈ ನಟನ ಜೀವನ ಚರಿತ್ರೆ ಯಾವ ಸಿನಿಮಾಕ್ಕೂ‌ ಕಡಿಮೆ ಇಲ್ಲ…!!

ನ್ಯೂಸ್ ಆ್ಯರೋ : ಡಬಲ್ ಡಿಗ್ರಿ ಪಡೆದುಕೊಂಡರೆ ಮಾತ್ರ ನಾವು ಲಕ್ಷ ಎಣಿಸುವ ಉದ್ಯೋಗ ಪಡೆದುಕೊಳ್ಳಬಹುದು ಎಂಬುವುದು ದೂರದ ಮಾತು. ಈಗ ಕೌಶಲ್ಯಗಳಿದ್ದರೂ ವಿದ್ಯೆ ಇಲ್ಲದವ ಲಕ್ಷ ಸಂಪಾದನೆ ಮಾಡುತ್ತಿರುವ ಅದೆಷ್ಟೋ ನಿದರ್ಶನಗಳನ್ನು ನಾವು ನೋಡುತ್ತಿರುತ್ತೇವೆ. ಸಿನಿಮಾ ರಂಗದಲ್ಲಿ ಮಿಂಚುತ್ತಿರುವ ಸೆಲೆಬ್ರೆಟಿಗಳು ಅದಕ್ಕೆ ಹೊರತಲ್ಲ ಬಿಡಿ. ಅದೃಷ್ಟ ಎಂಬುದು ಯಾವ ವ್ಯಕ್ತಿಗೆ ಯಾವ ರೂಪದಲ್ಲಿ ಬರುತ್ತದೆ ಅಂತ ಯಾರಿಂದಲೂ ಊಹಿಸುವುದಕ್ಕೂ ಸಾಧ್ಯವಾಗುವುದಿಲ್ಲ ನೋಡಿ. ಇಂದು ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುತ್ತಿದ್ದ ವ್ಯಕ್ತಿ ಮುಂದೊಂದು ದಿನ ದೊಡ್ಡ ಶ್ರೀಮಂತನಾಗಿ ಬೆಳೆಯಬಹುದು.

ಹೌದು, ಇಂತಹ ಉದಾಹರಣೆಗಳು ನಮ್ಮ ಮಧ್ಯೆ ತುಂಬಾನೇ ನೋಡಲು ಸಿಗುತ್ತವೆ. ಇಲ್ಲೊಬ್ಬ ನಟನ ಜೀವನ ಸಹ ಇದಕ್ಕೆ ಒಳ್ಳೆಯ ಉದಾಹರಣೆ ಅಂತ ಹೇಳಬಹುದು. ಇವರು 7ನೇ ಕ್ಲಾಸ್ ಫೇಲ್ ಆಗಿದ್ರೂ ಈಗ ಕೋಟಿ ರೂ. ಆಸ್ತಿಗೆ ಒಡೆಯರಾಗಿದ್ದಾರೆ…! ಅವರು ಯಾರು ಗೊತ್ತಾ..?

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಈಗ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ, ಅವರು ಇಷ್ಟೆಲ್ಲಾ ಆಸ್ತಿ ಮತ್ತು ಹೆಸರು ಸಂಪಾದಿಸಲು ನಿಜವಾಗಿಯೂ ತುಂಬಾನೇ ಕಷ್ಟಪಟ್ಟಿದ್ದಾರೆ.

ನಟ ಅಕ್ಷಯ್ ಕುಮಾರ್ ಬೆಳೆದು ಬಂದ ರೀತಿ…

ಹೊಟೇಲ್‌ನಲ್ಲಿ ಮಾಣಿಯಾಗಿ ಕೆಲಸ ಮಾಡುವುದರಿಂದ ಹಿಡಿದು ಭಾರತದ ದೊಡ್ಡ ನಟರಲ್ಲಿ ಒಬ್ಬರಾಗುವವರೆಗಿನ ಪ್ರಯಾಣ ಮಾತ್ರ ಸುಲಭದ್ದಾಗಿರಲಿಲ್ಲ. ಚಿಕ್ಕವನಿದ್ದಾಗ ಮಾತುಂಗಾದ ಡಾನ್ ಬಾಸ್ಕೋ ಹೈಸ್ಕೂಲಿಗೆ ಹೋಗಿ ಅಲ್ಲಿ ಕರಾಟೆ ಕಲಿಯತೊಡಗಿದ್ರಂತೆ ಅಕ್ಷಯ್. ಅವರಿಗೆ ಓದಿನಲ್ಲಿ ಅಷ್ಟೊಂದು ಆಸಕ್ತಿ ಇರಲಿಲ್ಲವಂತೆ. ಅವರ ಸಂದರ್ಶನವೊಂದರಲ್ಲಿ, ಅವರು 7ನೇ ತರಗತಿಯಲ್ಲಿ ಫೇಲ್ ಆಗಿರುವುದನ್ನು ಹೇಳಿಕೊಂಡಿದ್ದರು.

ಅವರ ತಂದೆ ಅಕ್ಷಯ್ ಅವರನ್ನ ಕರೆದು “ನೀನು ಮುಂದೆ ಏನಾಗಬೇಕೆಂದು ಬಯಸುತ್ತಿಯಾ?” ಎಂದು ಕೇಳಿದ್ರಂತೆ, ಅದಕ್ಕೆ ಅಕ್ಷಯ್ “ನಾನು ಒಬ್ಬ ನಟನಾಗಲು ಬಯಸುತ್ತೇನೆ” ಅಂತ ಹೇಳಿದ್ರಂತೆ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಒಂದೇ ಮನೆಯಲ್ಲಿ 24 ಜನರು ವಾಸಿಸುತ್ತಿದ್ದರಂತೆ…!

ತಮ್ಮ ಬಾಲ್ಯದ ಬಗ್ಗೆ ಮಾತನಾಡುತ್ತಾ ಅಕ್ಷಯ್ ಅವರು “ನಾವು ದೆಹಲಿಯ ಚಾಂದಿನಿ ಚೌಕ್‌ನಲ್ಲಿ ಒಂದೇ ಮನೆಯಲ್ಲಿ 24 ಜನರು ವಾಸಿಸುತ್ತಿದ್ದೆವು. ನಾವೆಲ್ಲರೂ ಒಂದೇ ಕೋಣೆಯಲ್ಲಿ ಮಲಗುತ್ತಿದ್ದೆವು. ಬೆಳಗ್ಗೆ ಎಲ್ಲರೂ ಎದ್ದು ಹೊರಗೆ ವಾಕಿಂಗ್ ಮಾಡಲು ಹೋಗುತ್ತಿದ್ದೆವು. ಆ ಮನೆಯ ಬಾಡಿಗೆ ಆಗ ಬರೀ 100 ರೂಪಾಯಿ ಆಗಿತ್ತು” ಎಂದು ಹೇಳಿದರು.

ಓದಿನಲ್ಲಿ ಆಸಕ್ತಿಯಿಲ್ಲದಿರುವುದರಿಂದ ಮಾರ್ಷಲ್ ಆರ್ಟ್ಸ್ ಕಲೆಗಳನ್ನು ಕಲಿತುಕೊಳ್ಳಲು ತಮ್ಮ ತಂದೆಯ ಬೆಂಬಲದೊಂದಿಗೆ ಥೈಲ್ಯಾಂಡ್‌ಗೆ ತೆರಳಿದರು. ಬ್ಯಾಂಕಾಕ್‌ನಲ್ಲಿ ಐದು ವರ್ಷಗಳನ್ನು ಕಳೆದ ಅವರು ಥಾಯ್ ಬಾಕ್ಸಿಂಗ್‌ನಲ್ಲಿ ತೊಡಗಿಸಿಕೊಂಡರು.ಅಕ್ಷಯ್ ಅವರು ಬ್ಯಾಂಕಾಕ್‌ನಲ್ಲಿ ತಮ್ಮ ತರಬೇತಿಯನ್ನು ಮುಂದುವರೆಸಿದರು, ಬಾಣಸಿಗ ಮತ್ತು ಮಾಣಿಯಾಗಿ ಸಹ ಅಲ್ಲಿ ಕೆಲಸ ಮಾಡಿದರಂತೆ.

ಥಾಯ್ಲೆಂಡ್‌ ನಂತರ, ಅಕ್ಷಯ್ ಕಲ್ಕತ್ತಾದಲ್ಲಿ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡಿದರು, ಢಾಕಾ ಮತ್ತು ದೆಹಲಿಯಲ್ಲಿ ಕುಂದನ್ ಆಭರಣಗಳನ್ನು ಮಾರಾಟ ಮಾಡಿದರು. ಬಾಂಬೆಗೆ ಹಿಂದಿರುಗಿದ ನಂತರ, ಮಾರ್ಷಲ್ ಆರ್ಟ್ಸ್ ಅನ್ನು ಕಲಿಸಲು ಶುರು ಮಾಡಿದರು.

ಅಕ್ಷಯ್ ಅವರ ಚೊಚ್ಚಲ ಹಿಂದಿ ಸಿನಿಮಾ ಯಾವುದು ಗೊತ್ತಾ…?

ಅಕ್ಷಯ್ ಅವರ ಆರಂಭಿಕ ಪರದೆಯ ಚೊಚ್ಚಲ ಚಿತ್ರವು ಆಜ್ ಆಗಿತ್ತಂತೆ, ಆ ಚಿತ್ರದಲ್ಲಿ ಕರಾಟೆ ಬೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಂತೆ. ನಂತರ ಅವರು ಒಮ್ಮೆ ಬೆಂಗಳೂರಿನಲ್ಲಿ ಜಾಹೀರಾತಿನ ಚಿತ್ರೀಕರಣಕ್ಕಾಗಿ ಹೋಗುವಾಗ ತಮ್ಮ ಫ್ಲೈಟ್ ಮಿಸ್ ಮಾಡಿಕೊಂಡರಂತೆ. ಆಗ ತುಂಬಾನೇ ನಿರಾಶೆಯಾಗಿ ಫಿಲ್ಮ್ ಸ್ಟುಡಿಯೋಗೆ ಹೋದರಂತೆ ಮತ್ತು ಅದೇ ಸಂಜೆ ನಿರ್ಮಾಪಕ ಪ್ರಮೋದ್ ಚಕ್ರವರ್ತಿ ಅವರ ದೀದಾರ್ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಇವರಿಗೆ ನೀಡಿದರಂತೆ.

ಅಕ್ಷಯ್ ಒಟ್ಟು ಆಸ್ತಿ 2,500 ಕೋಟಿ ರೂಪಾಯಿ..!!

ಮುಂಬೈನಲ್ಲಿ 80 ಕೋಟಿ ವೆಚ್ಚದ ಐಷಾರಾಮಿ ಬಂಗಲೆಯನ್ನು ಹೊಂದಿರುವ ಅಕ್ಷಯ್ ಕುಮಾರ್ ಈಗ ಶ್ರೀಮಂತ ನಟರಲ್ಲಿ ಒಬ್ಬರಾಗಿದ್ದಾರೆ. ವರದಿಗಳ ಪ್ರಕಾರ, ಅಕ್ಷಯ್ ಕುಮಾರ್ ಈಗ 2,500 ಕೋಟಿ ರೂಪಾಯಿ ಆಸ್ತಿಯ ಒಡೆಯ. ಅವರು ಗೋವಾ, ಕೆನಡಾ ಮತ್ತು ಇತರ ಸ್ಥಳಗಳಲ್ಲಿ ಮನೆಗಳನ್ನು ಹೊಂದಿದ್ದಾರೆ.

ಮನಸ್ಸಿದ್ದರೆ ನಾವು ಏನನ್ನು ಬೇಕಾದರೂ ಸಾಧಿಸಬಹುದು ಎಂಬ ಮಾತಿಗೆ ಸಾಕ್ಷಿಯಾಗಿ ನಿಲ್ಲುತ್ತಾರೆ ನಟ ಅಕ್ಷಯ್ ಕುಮಾರ್ ಅವರು. ಪ್ರೈಮರಿ ಸ್ಕೂಲ್ ಪೂರ್ಣಗೊಳಿಸದಿದ್ದರೂ ಇವತ್ತು 2500 ಕೋಟಿ ಆಸ್ತಿಯ ಒಡೆಯನಾಗಿದ್ದಾರೆ ಎಂದರೆ ಅವರ ಸಾಧನೆ, ಛಲ ಮತ್ತು ಆತ್ಮವಿಶ್ವಾಸಕ್ಕೆ ಶಹಬ್ಬಾಸ್ ಎನ್ನಲೇಬೇಕು.