‘ಒಂದು ರಾಷ್ಟ್ರ, ಒಂದು ಚುನಾವಣೆ’ ವಿಚಾರ; ಸಿಎಂ ಸಿದ್ದರಾಮಯ್ಯ ಖಡಕ್‌ ಪ್ರತಿಕ್ರಿಯೆ

Cm
Spread the love

ನ್ಯೂಸ್ ಆ್ಯರೋ: ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಯನ್ನು ವಿರೋಧಿಸಿ ಕರ್ನಾಟಕ ಸರ್ಕಾರ ನಿರ್ಣಯ ಅಂಗೀಕರಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಗತ್ಯಬಿದ್ದರೆ ಕೇರಳದಂತೆ ನಿರ್ಣಯ ಕೈಗೊಂಡು ಈ ಪ್ರಜಾಪ್ರಭುತ್ವ ವಿರೋಧಿ ಕ್ರಮದ ವಿರುದ್ಧ ಪ್ರಬಲ ಸಂದೇಶ ರವಾನಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಿದ್ದರಾಮಯ್ಯ, ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’’ ಮಸೂದೆ ಸಂಸದೀಯ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವುದು ಮಾತ್ರವಲ್ಲ, ಇದರ ಹಿಂದೆ ರಾಜ್ಯಗಳ ಹಕ್ಕುಗಳನ್ನು ಮೊಟಕುಗೊಳಿಸುವ ದುರಾಲೋಚನೆ ಕೂಡಾ ಇದೆ. ಕೇರಳ ಸರ್ಕಾರ ಈಗಾಗಲೇ ‘’ಒಂದು ರಾಷ್ಟ್ರ, ಒಂದು ಚುನಾವಣೆ’’ ಪ್ರಸ್ತಾವವನ್ನು ವಿರೋಧಿಸಿ ಗೊತ್ತುವಳಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿದೆ. ಅಗತ್ಯ ಬಿದ್ದರೆ ನಮ್ಮ ಸರ್ಕಾರ ಕೂಡಾ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಜೊತೆ ಸಮಾಲೋಚನೆ ನಡೆಸಿ ‘’ಒಂದು ರಾಷ್ಟ್ರ, ಒಂದು ಚುನಾವಣೆ’’ ಮಸೂದೆ ವಿರುದ್ದ ಬಹುಮತದ ಗೊತ್ತುವಳಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಡಲಾಗುವುದು.

ಹಲವಾರು ದೋಷಗಳಿಂದ ಕೂಡಿರುವ ಈಗಿನ ಚುನಾವಣಾ ವ್ಯವಸ್ಥೆಯನ್ನು ಸುಧಾರಣೆಗೊಳಪಡಿಸುವ ತುರ್ತು ಅಗತ್ಯ ಇರುವ ಈ ಸಂದರ್ಭದಲ್ಲಿ ಇಂತಹ ಮಸೂದೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ದುರ್ಬಲಗೊಳಿಸಲಿದೆ. ಇಂತಹದ್ದೊಂದು ಮುಖ್ಯವಾದ ಮಸೂದೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆಯುವ ಮೊದಲು ವಿರೋಧಪಕ್ಷಗಳು ಮತ್ತು ರಾಜ್ಯ ಸರ್ಕಾರಗಳ ಜೊತೆ ಸಮಾಲೋಚನೆ ನಡೆಸಬೇಕಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಸರ್ವಾಧಿಕಾರಿ ಧೋರಣೆಯಿಂದ ಈ ಮಸೂದೆಯನ್ನು ದೇಶದ ಮೇಲೆ ಹೇರಲು ಹೊರಟಿದೆ ಎಂದು ಆರೋಪಿಸಿದ್ದಾರೆ. ಲೋಕಸಭೆ ಇಲ್ಲವೇ ವಿಧಾನಸಭೆಯಲ್ಲಿ ಆಡಳಿತಾರೂಢ ಪಕ್ಷ ವಿಶ್ವಾಸಮತ ಗಳಿಸಲು ಸೋತುಹೋಗುವ ಸಂದರ್ಭದಲ್ಲಿ ಎದುರಾಗುವ ಬಿಕ್ಕಟ್ಟಿಗೆ ಈ ಪ್ರಸ್ತಾವದಲ್ಲಿ ಪರಿಹಾರವೇ ಇಲ್ಲ ಎಂದರು ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಯೊಂದೇ ಯೋಗ್ಯ ಪರಿಹಾರ. ಇದರ ಬದಲಿಗೆ ಸದನದಲ್ಲಿ ವಿಶ್ವಾಸ ಮತ ಗಳಿಸಲು ವಿಫಲವಾದ ಅಲ್ಪಸಂಖ್ಯಾತ ಪಕ್ಷ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆಯುವ ದ್ರೋಹವಾಗುತ್ತದೆ.

ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕಾದರೆ ಮೊದಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗಿದೆ. ಇದರ ಜೊತೆಗೆ ಸಂವಿಧಾನದ ಕನಿಷ್ಠ ಐದು ವಿಧಿಗಳಿಗೆ ತಿದ್ದುಪಡಿ ತರಬೇಕಾಗಿದೆ. ಇಡೀ ದೇಶದಲ್ಲಿ ಒಂದೇ ಬಾರಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವ ಶಕ್ತಿ-ಸಾಮರ್ಥ್ಯ ನಮ್ಮ ಈಗಿನ ಚುನಾವಣಾ ಆಯೋಗಕ್ಕೆ ಇಲ್ಲ. ನರೇಂದ್ರ ಮೋದಿ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ‍್ಳಲು ಆಗಾಗ ಇಂತಹ ಗಿಮಿಕ್ ಗಳನ್ನು ಪ್ರದರ್ಶಿಸುತ್ತದೆ ಎಂದು ಕಿಡಿಕಾರಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!