
ಉಡುಪಿ : ನಾಲ್ವರ ಕೊಲೆ ಪ್ರಕರಣ, ಸ್ಥಳ ಮಹಜರು ನಡೆಸಿದ ಪೋಲಿಸರು – ಆತ 15 ನಿಮಿಷ ತಗೊಂಡಿದಾನೆ, ನಮ್ಗೆ 30 ಸೆಕೆಂಡ್ ಕೊಡಿ : ಸಾರ್ವಜನಿಕರ ಆಕ್ರೋಶ
- ಕರಾವಳಿ
- November 16, 2023
- No Comment
- 57
ನ್ಯೂಸ್ ಆ್ಯರೋ : ಉಡುಪಿಯ ನೇಜಾರಿನ ಮನೆಯ ಒಂದೇ ಕುಟುಂಬದ ನಾಲ್ವರು ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕೃತ್ಯ ನಡೆದ ಮನೆಗೆ ಕರೆತರಲಾಗಿದ್ದು, ಪೋಲಿಸರು ಸ್ಥಳ ಮಹಜರು ಮಾಡಿದ್ದಾರೆ.
ಉಡುಪಿಯ ನೇಜಾರು ತೃಪ್ತಿ ನಗರದಲ್ಲಿ ಮಹಜರು ಮಾಡಲಾಗಿದ್ದು, ಆರೋಪಿ ಪ್ರವೀಣ್ ಅರುಣ್ ಚೌಗುಲೆಯನ್ನು ಪೋಲಿಸರು ಕರೆತಂದಿದ್ದಾರೆ.
ಈ ವೇಳೆ ಉಡುಪಿಯ ತೃಪ್ತಿ ನಗರದಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿ ನಾವು ಶಿಕ್ಷೆ ಕೊಡುತ್ತೇವೆ ಎಂದು ಪೊಲೀಸ್ ಮಹಜರು ಸ್ಥಳದಲ್ಲಿ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದರು.

ಆರೋಪಿ ಇದ್ದ ಪೊಲೀಸ್ ವಾಹನದ ಮೇಲೆ ಜನರು ನುಗ್ಗಿದ್ದು, ಲಾಟಿ ಹಿಡಿದು ಸಾರ್ವಜನಿಕರನ್ನು ಪೋಲಿಸರು ಚದುರಿಸಿದರು. ಈ ವೇಳೆ ಸ್ಥಳದಲ್ಲಿ ಕೆಲ ಸಾರ್ವಜನಿಕರಿಗೆ ಲಾಟಿ ಏಟು ಬಿದ್ದವು.
ಆತ 15 ನಿಮಿಷ ತೆಗೆದುಕೊಂಡಿದ್ದಾನೆ ನಮಗೆ 30 ಸೆಕೆಂಡು ಅವನನ್ನು ಕೊಡಿ ಎಂದ ಸಾರ್ವಜನಿಕರು, ತೃಪ್ತಿ ನಗರ ದಲ್ಲಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜನಾಕ್ರೋಶದ ನಡುವೆಯೂ ಮಹಜರು ಮುಗಿಸಿ ಆರೋಪಿಯನ್ನು ಪೊಲೀಸರು ಕರೆದೊಯ್ದಿದ್ದಾರೆ.