
ಅಯೋಧ್ಯೆಯ ಶ್ರೀರಾಮನ ಮೂರ್ತಿಗೆ ಕಾರ್ಕಳದ ‘ಕೃಷ್ಣ ಶಿಲೆ’ – ಕರಿಕಲ್ಲಿನ ನಗರಿಗೆ ಮತ್ತೊಂದು ಕಿರೀಟ, 9 ಟನ್ ತೂಕದ ಕಲ್ಲು ರವಾನೆ
- ಕರಾವಳಿ
- March 18, 2023
- No Comment
- 184
ನ್ಯೂಸ್ ಆ್ಯರೋ : ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರದ ಗರ್ಭಗುಡಿಯಲ್ಲಿ ಸ್ಥಾಪನೆಯಾಗಲಿರುವ ರಾಮಲಲ್ಲಾನ ಮೂರ್ತಿ ಕೆತ್ತನೆಗೆ ಆಯ್ಕೆ ಮಾಡಲಾದ 2-3 ಶಿಲೆಗಳ ಪೈಕಿ ಉಡುಪಿ ಜಿಲ್ಲೆಯ ಕಾರ್ಕಳದ ಕೃಷ್ಣಶಿಲೆಯನ್ನು ಆಯ್ಕೆ ಮಾಡಲಾಗಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಈ ಶಿಲೆಯಿಂದ ರಾಮಲಲ್ಲಾನ ಮೂರ್ತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಗುರುವಾರ ರಾತ್ರಿ ಕಾರ್ಕಳ ತಾಲೂಕಿನ ಈದು ಗ್ರಾಮದ ತುಂಗಾ ಪೂಜಾರಿ ಮನೆಯಿಂದ ನೆಲ್ಲಿಕಾರು ಮಾದರಿಯ ಶಿಲೆಯನ್ನು ಬೃಹತ್ ಲಾರಿ ಮೂಲಕ ಅಯೋಧ್ಯೆಗೆ ಸಾಗಿಸಲಾಯಿತು. ಗಣ್ಯರ ಸಮ್ಮುಖದಲ್ಲಿ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಕಳದ ನೆಲ್ಲಿಕಾರು ಶಿಲೆಯು ಅಯೋಧ್ಯೆಯಲ್ಲಿ ಮೂರ್ತಿ ನಿರ್ಮಾಣದ ಮೂಲಕ ಮತ್ತೆ ಪಾವಿತ್ರ್ಯತೆ ಪಡೆಯಲಿದೆ. ಈ ಮೂಲಕ ಶಿಲ್ಪಗಳ ತವರೂರು ಎಂದೇ ಖ್ಯಾತಿ ಪಡೆದಿರುವ ಕಾರ್ಕಳದ ಹಿರಿಮೆ ಮತ್ತಷ್ಟು ಹೆಚ್ಚಿದೆ.

ಈಗಾಗಲೇ ನೇಪಾಳ ಸೇರಿ ಎರಡ್ಮೂರು ಕಡೆಗಳಿಂದ ರಾಮಲಲ್ಲಾನ ಮೂರ್ತಿ ನಿರ್ಮಾಣಕ್ಕೆ ವಿಶಿಷ್ಟ ಶಿಲೆಗಳನ್ನು ಅಯೋಧ್ಯೆಗೆ ತರಿಸಲಾಗಿದೆ. ಆ ಪಟ್ಟಿಗೆ ಇದೀಗ ಕಾರ್ಕಳದ ಶಿಲೆಯೂ ಸೇರಿದೆ. ಈ ಶಿಲೆಗಳ ಪೈಕಿ ಸೂಕ್ತವಾದುದನ್ನು ಮೂರ್ತಿ ನಿರ್ಮಾಣಕ್ಕೆ ಬಳಸಲಾಗುವುದು ಎಂದು ತಿಳಿದುಬಂದಿದೆ.
ರಾಮಮಂದಿರ ನಿರ್ಮಾಣಕ್ಕೆ ಈಗಾಗಲೇ ರಾಜ್ಯದ ಚಿಕ್ಕಬಳ್ಳಾಪುರದ ಕಲ್ಲುಗಳನ್ನು ಬಳಸಲಾಗಿದೆ. ಚಿಕ್ಕಬಳ್ಳಾಪುರದಲ್ಲಿ ಸಿಗುವ ಶಿಲೆಗಳು ಅತಿ ಹೆಚ್ಚಿನ ಹಾಗೂ ಅತಿ ಕಡಿಮೆ ತಾಪಮಾನ ಎರಡನ್ನೂ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ರಾಮಮಂದಿರದ ಅಡಿಪಾಯಕ್ಕಾಗಿ ಆ ಶಿಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಶ್ರೀರಾಮನ ಮೂರ್ತಿ ನಿರ್ಮಾಣಕ್ಕೆ ಯೋಗ್ಯ ಕಲ್ಲನ್ನು ಹುಡುಕುವ ಕಾರ್ಯ ಹಲವು ತಿಂಗಳಿಂದ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಕೆಲವು ತಿಂಗಳುಗಳ ಹಿಂದೆ ಖ್ಯಾತ ಶಿಲಾ ತಜ್ಞ ಕುಶೀಪ್ ಬನ್ಸಾಲ್ ಸೇರಿದಂತೆ ಇತರ ತಜ್ಞರ ಜೊತೆಗೂಡಿ ಸ್ಥಳಿಯ ಬಜರಂಗದಳ ಕಾರ್ಯಕರ್ತರು ಕಾರ್ಕಳದ ನೆಲ್ಲಿಕಾರು ಶಿಲೆಯನ್ನು ಪರಿಶೀಲಿಸಿದ್ದರು. ಈ ಶಿಲೆಯು 9 ಟನ್ ತೂಕ, 10 ಅಡಿ ಉದ್ದ, 6 ಅಡಿ ಅಗಲ ಮತ್ತು 4 ಅಡಿ ದಪ್ಪವಿದ್ದು ಯೋಗ್ಯ ಎನ್ನುವ ನಿಟ್ಟಿನಲ್ಲಿ ಅಯೋಧ್ಯೆಗೆ ಸಾಗಿಸುವ ಕಾರ್ಯಗಳು ನಡೆದಿದೆ.
ಕರಿಕಲ್ಲಿನ ನಗರಿ ಎಂದು ಕರೆಯಲ್ಪಡುವ ಕಾರ್ಕಳದ ನೆಲ್ಲಿಕಾರಿನ ಶಿಲೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದ್ದು, ರಾಷ್ಟ್ರಪತಿ ಭವನದಲ್ಲಿರುವ ಕಾರ್ಕಳ ಬಾಹುಬಲಿ, ಮಾನಸ್ತಂಭ ಪ್ರತಿಕೃತಿ, ಕವಿ ಮುದ್ದಣ, ಮಿಥುನ ನಾಗ ,ಸೋಮನಾಥ ಪುರದ ದ್ವಾರ, ಗಜಸಿಂಹ, ಗೇಟ್ ವೇ, ಕಲ್ಲಿನ ಕಾರಂಜಿ, ಚೆನ್ನಿಗರಾಯ ದೇವರು ಸೇರಿದಂತೆ ಒಟ್ಟು ಹತ್ತು ವಿಗ್ರಹಗಳನ್ನು ಇದೇ ಕಲ್ಲಿನಿಂದ ತಯಾರಿಸಲಾಗಿದೆ.


ದೆಹಲಿಯ ಗುರುಗ್ರಾಮ ರಸ್ತೆಯಲ್ಲಿರುವ 15 ಅಡಿ ಎತ್ತರದ ಮಹಾವೀರ ವಿಗ್ರಹ, ದೆಹಲಿಯ ಮಹಾವೀರನ ಪ್ರತಿಮೆ, ಗುರುವಾಯೂರಿನಲ್ಲಿರುವ ಒಂದು ಶ್ರೀಕೃಷ್ಣ ಪ್ರತಿಮೆ, ಕೆನಡಾದ ಟೊರೆಂಟೋದಲ್ಲಿರುವ ದೇವೇಂದ್ರನ ವಿಗ್ರಹ, ಜಪಾನ್‌ನ ಅವಲೋಹಿತೇಶ್ವರ ಪ್ರತಿಮೆ, ಇಂಗ್ಲೆಂಡ್‌ನ ಮ್ಯೂಸಿಯಂನಲ್ಲಿರುವ ಕೃಷ್ಣ ವಿಗ್ರಹ, ಇತ್ತೀಚೆಗೆ ಮಲೇಷ್ಯಾದಲ್ಲಿ ದುರ್ಗ ವಿಗ್ರಹವನ್ನೂ ಇಲ್ಲಿನ ಶಿಲೆಯಲ್ಲೇ ಕೆತ್ತಲಾಗಿದೆ.
‘ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಶಿಲೆ ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಕೆತ್ತನೆಗೆ ಆಯ್ಕೆಯಾಗಿದೆ. ಪೂರ್ತಿ ವಿಶ್ವವೇ ಈ ಶಿಲೆಯಿಂದ ರೂಪುಗೊಳ್ಳಲಿರುವ ಭಗವಾನ್ ಶ್ರೀರಾಮನ ದರ್ಶನ ಪಡೆಯಲಿದೆ ಎಂಬುದು ನಮ್ಮನ್ನು ಪುಳಕಿತರನ್ನಾಗಿ ಮಾಡಿದೆ. ಈ ಸೇವೆ ಮಾಡುವ ಅವಕಾಶವನ್ನು ರಾಜ್ಯಕ್ಕೆ ನೀಡಿದ ಪ್ರಭು ಶ್ರೀರಾಮನಿಗೆ ಶಿರಸಾಷ್ಟಾಂಗ ನಮಸ್ಕಾರಗಳು’ ಅಂತ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.