
ಉಡುಪಿ : MLA ಟಿಕೆಟ್ ಕೊಡಿಸೋದಾಗಿ ಉದ್ಯಮಿಗೆ ಏಳು ಕೋಟಿ ವಂಚನೆ ಪ್ರಕರಣ – ಬಂಧನದ ವೇಳೆ ಚೈತ್ರಾ ಕುಂದಾಪುರ ಹೈಡ್ರಾಮಾ, ವಿಡಿಯೋದಲ್ಲಿ ಸೆರೆಯಾಗಿದ್ದೇನು?
- ಕರಾವಳಿ
- September 13, 2023
- No Comment
- 368
ನ್ಯೂಸ್ ಆ್ಯರೋ : ಮುಂಬಯಿಯ ಉದ್ಯಮಿಯೊಬ್ಬರಿಗೆ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ರೂಪಾಯಿ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದು, ಬಂಧನದ ವೇಳೆಯೂ ಚೈತ್ರಾ ಹೈಡ್ರಾಮಾ ಮಾಡಿದ್ದಾಳೆ.
ತನ್ನ ವಿರುದ್ಧ ಪ್ರಕರಣ ದಾಖಲಾಗುತ್ತಲೇ ಕಳೆದ ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಕೊನೆಗೂ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ಸಿನಿಮಿಯ ಶೈಲಿಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮುಸ್ಲಿಂ ಧರ್ಮದ ಸ್ನೇಹಿತೆಯ ಮನೆಯಲ್ಲಿ ಅಡಗಿ ಕುಳಿತಿದ್ದ ಚೈತ್ರಾ ಕುಂದಾಪುರ ಪೋಲಿಸರ ಹಠಾತ್ ಎಂಟ್ರಿಯಿಂದ ಕಂಗಾಲಾಗಿದ್ದಳು ಎನ್ನಲಾಗಿದೆ. ಅಲ್ಲದೇ ಬಂಧನದ ವೇಳೆ ಚೈತ್ರಾ ಡ್ರಾಮಾ ಶುರು ಮಾಡಿದ್ದು, ಯಾವುದೇ ಪೋಲಿಸ್ ಸಿಬ್ಬಂದಿ ಹೊಡೆಯದಿದ್ದರೂ “ನನಗೆ ಹೊಡೆಯಬೇಡಿ, ನಿಮಗೆ ಹೊಡೆಯುವ ರೈಟ್ಸ್ ಇಲ್ಲ” ಎಂದೆಲ್ಲಾ ಚೀರಾಡಿದ್ದಾಳೆ. “ನನ್ನದು ಸಿಲ್ವರ್ ಬ್ಯಾಗ್, ಅದೇ ಬೇಕು” ಎಂದು ಬೊಬ್ಬೆ ಹೊಡೆದು ನಾಟಕ ಮಾಡಿದ್ದಾಳೆ. ಆದರೆ ಚೈತ್ರಾ ಕುಂದಾಪುರ ಡ್ರಾಮಾಕ್ಕೆ ಸೊಪ್ಪು ಹಾಕದ ಸಿಸಿಬಿ ಪೋಲಿಸರು ತಮ್ಮ ವಾಹನದಲ್ಲಿ ತುಂಬಿಸಿಕೊಂಡು ಸಾಗಿದ್ದಾರೆ.
ಇದೇ ಚೈತ್ರಾ ಅಂದೊಮ್ಮೆ ಗುರುಪ್ರಸಾದ್ ಪಂಜ ಎಂಬವರ ಜೊತೆ ಕಾಲು ಕೆರೆದು ಜಗಳ ಮಾಡಿಕೊಂಡಿದ್ದು, ಬಳಿಕ ತನ್ನ ಪಟಾಲಂ ಜೊತೆ ಗುರುಪ್ರಸಾದ್ ಪಂಜ ಇದ್ದ ಸುಬ್ರಹ್ಮಣ್ಯಕ್ಕೆ ತೆರಳಿದ್ದಳು. ಅಲ್ಲೂ ಕೂಡ ಮಾತಿಗೆ ಮಾತು ಬೆಳೆದು ಹೊಯ್ ಕೈ ನಡೆದಿದ್ದು, ಆ ವೇಳೆ ಸುಖಾಸುಮ್ಮನೆ ನನ್ನ ಚೈನ್ ಕೊಡ ಬ್ಯಾ…. ಎಂದೆಲ್ಲಾ ಚೀರಾಡಿ ಡ್ರಾಮಾ ಮಾಡಿದ್ದಳು. ಆ ಬಗ್ಗೆ ಪ್ರಕರಣವೂ ದಾಖಲಾಗಿ ಬಡಪಾಯಿ ಗುರುಪ್ರಸಾದ್ ಕಾನೂನಿನಡಿ ಅಪರಾಧಿಯಾಗಿದ್ದರು.
ಪತ್ರಕರ್ತರಿಗೂ ಧಮ್ಕಿ ಹಾಕಿದ್ದ ಚೈತ್ರಾ : ಕೋಟಿ ವಂಚನೆ ಪ್ರಕರಣ ಈ ಮೊದಲು ಸುದ್ದಿಯಾದಾಗ ಈ ಬಗ್ಗೆ ಚೈತ್ರಾ ಕುಂದಾಪುರ ಬಳಿ ಸ್ಪಷ್ಟನೆ ಕೇಳಲು ಪತ್ರಕರ್ತರು ಆಕೆಯನ್ನು ಸಂಪರ್ಕಿಸಿದಾಗ ಚೈತ್ರಾ ದುಂಡಾವರ್ತನೆ ತೋರಿದ್ದಳು. ನಿಮಗೆ ಅದೆಲ್ಲಾ ಯಾರು ಹೇಳಿದ್ದು? ನಿಮಗೆ ಯಾರು ಸಾಕ್ಷ್ಯ ಕಳುಹಿಸಿದ್ದು ಯಾರು ಹೇಳಿ? ಇಲ್ದೆ ಇದ್ರೆ ನಿಮ್ಮ ಮೇಲೆ ಕೂಡ ಡಿಫಮೇಷನ್ ಕೇಸ್ ಹಾಕಿಸಿ ಜೈಲು ಪಾಲು ಮಾಡುವೆ ಎಂದೆಲ್ಲಾ ಎಗರಾಡಿದ್ದಳು. ( ದಾಖಲೆ ನ್ಯೂಸ್ ಆ್ಯರೋ ಬಳಿ ಇದೆ) ಆದರೆ ಸದ್ಯ ಆಕೆಯೇ ಜೈಲು ಪಾಲಾಗಿದ್ದಾಳೆ.
ಏನಿದು ಕೋಟಿ ಸುಲಿಗೆ ಪ್ರಕರಣ?
ಉಡುಪಿ ಜಿಲ್ಲೆ, ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರು ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಇವರಿಗೆ ಚೈತ್ರಾ ಮತ್ತಾಕೆಯ ಸಹಚರರ ತಂಡ ಸುಮಾರು ಏಳು ಕೋಟಿ ರೂಪಾಯಿ ವಂಚನೆ ಮಾಡಿತ್ತು.
ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಬಿಲ್ಲವ ನಾಯಕ ಗೋವಿಂದ ಬಾಬು ಪೂಜಾರಿ ಅವರ ಮುಗ್ಧತೆಯನ್ನು ಬಳಸಿಕೊಂಡು ಚೈತ್ರಾಳ ತಂಡ ಮಹಾವಂಚನೆ ನಡೆಸಿತ್ತು.
ಉತ್ತರ ಕರ್ನಾಟಕ ಭಾಗದಲ್ಲಿ ಭಾಷಣಕಾರ್ತಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ, ಟಿಕೆಟ್ ಕೊಡಿಸುವುದಾಗಿ ನಾಲ್ಕೈದು ಜನರ ತಂಡದಿಂದ ಬೃಹನ್ನಾಟಕ ನಡೆಸಿದ್ದಳು. ಕೇಂದ್ರದ ನಾಯಕರು, ಆರೆಸ್ಸೆಸ್ ಪ್ರಮುಖರ ಹೆಸರಿನಲ್ಲಿ ಪಂಗನಾಮ ಹಾಕಿದ್ದಳು. ಅಲ್ಲದೆ ಆರ್ ಎಸ್ ಎಸ್ ಪ್ರಮುಖರು ಎಂದು ನಕಲಿ ನಾಯಕರನ್ನು ಸೃಷ್ಟಿ ಮಾಡಿದ್ದ ಚೈತ್ರಾ ಅಂಡ್ ಟೀಮ್ ಬಳಿಕ ಹಂತ ಹಂತವಾಗಿ ಗೋವಿಂದ ಬಾಬು ಪೂಜಾರಿ ಅವರಿಂದ ಏಳು ಕೋಟಿ ರೂಪಾಯಿ ಸುಲಿಗೆ ಮಾಡಿತ್ತು.
ಚೈತ್ರಾ ಅಲ್ಲದೇ ಶ್ರೀಕಾಂತ್ ನಾಯಕ್ ಪೆಲತ್ತೂರು ಎಂಬಾತನನ್ನೂ ಕೂಡ ವಶಕ್ಕೆ ಪಡೆದ ಪೊಲೀಸರು ಇಬ್ಬರು ಆರೋಪಿಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಸುಮಾರು ಮೂರು ಹಂತದಲ್ಲಿ ಏಳು ಕೋಟಿ ರೂಪಾಯಿ ಪೀಕಿಸಿದ್ದ ಖದೀಮರು ಬೈಂದೂರು ಬಿಜೆಪಿಯ ಟಿಕೆಟ್ ಪಕ್ಕ ಮಾಡಿಕೊಡುವುದಾಗಿ ನಂಬಿಸಿ ವಂಚನೆ ಎಸಗಿದ್ದರು. ವಂಚನೆ ಪ್ರಕರಣದಲ್ಲಿ ಈವರೆಗೆ ಒಟ್ಟು ನಾಲ್ವರನ್ನು ಪೋಲಿಸರು ವಶಕ್ಕೆ ಪಡೆದಿದ್ದು, ಚೈತ್ರಾ ಕುಂದಾಪುರ, ಗಗನ್ ಕಡೂರು, ಶ್ರೀಕಾಂತ ನಾಯಕ್ ಪೆಲತ್ತೂರು ಮತ್ತು ಪ್ರಸಾದ್ ಈ ನಾಲ್ವರ ತಂಡ ಇದೀಗ ಪೋಲಿಸರ ಬಂಧನಕ್ಕೆ ಒಳಗಾಗಿದೆ.