ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಸಂಭ್ರಮ – ಮದ್ಯದಂಗಡಿ ಕ್ಲೋಸ್ ಮಾಡುವಂತೆ ದ.ಕ ಡಿಸಿ ಖಡಕ್ ಸೂಚನೆ…!

ನ್ಯೂಸ್ ಆ್ಯರೋ : ದ.ಕ ಜಿಲ್ಲೆಯ ಸುಪ್ರಸಿದ್ಧ ಕ್ಷೇತ್ರಗಳಾದ ಧರ್ಮಸ್ಥಳ, ಕಟೀಲು, ಮಂಗಳಾದೇವಿ ದೇವಸ್ಥಾನದಂತೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವೂ ಒಂದು. ಅತ್ಯಂತ ಮಹಿಮೆಯ ಪುಣ್ಯಕ್ಷೇತ್ರವಾದ ಇಲ್ಲಿ ಷಷ್ಠಿ ಮಹೋತ್ಸವ ಅಂದ್ರೆ ಅದೊಂದು ರೀತಿ ವಿಭಿನ್ನ ಆಚರಣೆ. ಚಂಪಾ ಷಷ್ಠಿ ಮಹೋತ್ಸವ, ರಥೋತ್ಸವದ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಬೇರೆ ಬೇರೆ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಇದೀಗ ಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿ ಮಹತ್ತರ ಘೋಷಣೆ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಮಹೋತ್ಸವ ಇದೇ ಡಿಸೆಂಬರ್ 24ರ ವರೆಗೆ ನಡೆಯಲಿದೆ.

ಷಷ್ಠಿ ಹಿನ್ನೆಲೆ ಮದ್ಯದಂಗಡಿ ಕ್ಲೋಸ್ ಮಾಡುವಂತೆ ಆದೇಶ…

ಡಿಸೆಂಬರ್ 16ರಿಂದ 19ರವರೆಗೆ ಮುಖ್ಯ ರಥೋತ್ಸವಗಳು ನಡೆಯಲಿದೆ. ಈ ಸಂದರ್ಭದಲ್ಲಿ ಅಪಾರ ಭಕ್ತದಿಗಳು ಸೇರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತ ದೃಷ್ಟಿಯಿಂದ ಡಿಸೆಂಬರ್ 17ರಂದು ಬೆಳಿಗ್ಗೆ 6 ಗಂಟೆಯಿಂದ ಡಿಸೆಂಬರ್ 18ರ ಮಧ್ಯರಾತ್ರಿ 12 ಗಂಟೆಯವರೆಗೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂಚಾಡಿ ಬಳಿ ಇರುವ ಪ್ರಶಾಂತ್ ಬಾರ್ ಆಂಡ್ ರೆಸ್ಟೋರೆಂಟ್ ಹಾಗೂ ಬೆಳ್ಳಿ ಬಾರ್ ಆಂಡ್ ರೆಸ್ಟೋರೆಂಟ್ ಗಳನ್ನು ಮತ್ತು ಎಲ್ಲಾ ವಿವಿಧ ಅಮಲು ಪದಾರ್ಥಗಳ ಮಾರಾಟವನ್ನು ನಿಷೇಧಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಅವರು ಆದೇಶಿಸಿದ್ದಾರೆ.