Mangalore : ಹಲವೆಡೆ ದ್ವಿಚಕ್ರ ವಾಹನ ಕಳವು, ವಾರಂಟ್ ಜಾರಿಯಾಗಿದ್ರೂ ಡೋಂಟ್ ಕೇರ್ – ತಲೆಮರೆಸಿಕೊಂಡು ಓಡಾಡುತ್ತಿದ್ದ ಖದೀಮನ ಸಹಿತ ಇಬ್ಬರ ಬಂಧನ

ನ್ಯೂಸ್ ಆ್ಯರೋ : ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿ ಸಹಿತ ವಿವಿಧೆಡೆ ಕಳ್ಳತನ ನಡೆಸಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕಸಬಾ ಬೆಂಗ್ರೆಯ ಮೊಹಮ್ಮದ್ ಆಸಿಫ್ ಅಲಿಯಾಸ್ ಆಸಿಫ್ ಅಲಿಯಾಸ್ ಆಚಿ‌ ತಂದೆ ಮಹಮ್ಮದ್ ಬಾವಾ (32) ಮತ್ತು ಮೊಹಮ್ಮದ್ ಸಫಾನ್ ತಂದೆ ಹಸನ್ ಸಾಲಿ (21) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳು ಪಡುಬಿದ್ರಿ ಗ್ರಾಮ ಸೇವಾ ಕೇಂದ್ರದಲ್ಲಿ ಕಳವು, ಕದ್ರಿ ಜಂಕ್ಷನ್ ನಲ್ಲಿ ಮೊಬೈಲ್ ಶಾಪ್, ಪೈಂಟ್ ಅಂಗಡಿಯಲ್ಲಿ ಕಳವು, ನಿರ್ಮಾಣ ಹಂತದ ಕಟ್ಟಡದಲ್ಲಿ ಕಳವು ನಡೆಸಿದ್ದರು. ಪೊಳಲಿ ದ್ವಾರದ ಬಳಿ ಹೊಟೇಲ್‌, ಅಂಗಡಿಗಳಲ್ಲಿ ಕಳವು, ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ತರ ಸಹಕಾರ ಸಂಘದಲ್ಲಿ ಕಳವು ಮಾಡಿದ್ದರು. ಅಲ್ಲದೆ ಮಂಗಳೂರಿನ ಮಂಕಿಸ್ಟ್ಯಾಂಡ್ ಮತ್ತು ಉತ್ತರ ದಕ್ಕೆಯಲ್ಲಿ ದ್ವಿಚಕ್ರ ವಾಹನ ಕಳವು ಮಾಡಿದ್ದರು.

ಆರೋಪಿಗಳ ವಶದಲ್ಲಿದ್ದ ಎರಡು ಲ್ಯಾಪ್ ಟ್ಯಾಪ್ ಎರಡು ದ್ವಿಚಕ್ರ ವಾಹನ ಸಹಿತ 1.20 ಲ.ರೂ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪೈಕಿ ಆಸಿಫ್ ವಿರುದ್ಧ ಈಗಾಗಲೇ ಮಂಗಳೂರು ಉತ್ತರ ಹಾಗೂ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡ ಕಾರಣ ವಾರಂಟ್ ಜಾರಿಯಾಗಿತ್ತು.

ಕಳೆದ ಡಿ.01 ರಂದು ಮಂಗಳೂರು ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರ ದಕ್ಕೆಯ ಬಳಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಆಕ್ಟಿವಾ ಸ್ಕೂಟರ್ ಕಳವು ಆದ ಬಗ್ಗೆ ಮಹಮ್ಮದ್ ಸಿನಾನ್ ಎಂಬವರು ನೀಡಿದ ದೂರಿನಂತೆ ಮಂಗಳೂರು ಉತ್ತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ತನಿಖೆ ವೇಳೆ ಆರೋಪಿಗಳು ಪೋಲಿಸರ ಬಲೆಗೆ ಬಿದ್ದಿದ್ದಾರೆ.