ಬಾಹ್ಯಾಕಾಶದಲ್ಲಿ ಇಸ್ರೋ ‘ಸೆಂಚುರಿ’; ನ್ಯಾವಿಗೇಶನ್ ಉಪಗ್ರಹ ಉಡ್ಡಯನ ಯಶಸ್ವಿ

ನ್ಯೂಸ್ ಆ್ಯರೋ: ಇಸ್ರೋ ವಿಜ್ಞಾನಿಗಳ ಐತಿಹಾಸಿಕ 100ನೇ ಉಡ್ಡಯನ ಇಂದು ಬೆಳಗ್ಗೆ ಯಶಸ್ವಿಯಾಯಿತು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ 2ನೇ ಲಾಂಚ್‌ಪ್ಯಾಡ್‌ನಿಂದ ನಭಕ್ಕೆ ಚಿಮ್ಮಿದ ಜಿಎಸ್‌ಎಲ್‌ವಿ ರಾಕೆಟ್, ನ್ಯಾವಿಗೇಷನ್ ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸಿತು. ಈ ಉಪಗ್ರಹದ ಮೂಲಕ ಭೂಮಿ, ವಾಯು ಮತ್ತು ಜಲ ಮಾರ್ಗಗಳಿಗೆ ನಿಖರ ಮಾಹಿತಿ ಹಾಗು ಕೃಷಿ ಸೇರಿದಂತೆ ಹಲವು ಕ್ಷೇತ್ರಗಳು ಪ್ರಯೋಜನ ಪಡೆಯಲಿವೆ.
“ಉಪಗ್ರಹವನ್ನು ನಿಖರವಾಗಿ ಕಕ್ಷೆಗೆ ಸೇರಿಸಲಾಗಿದೆ. ಇದು ಸಂಸ್ಥೆಯ 100ನೇ ಉಡ್ಡಯನವಾಗಿದ್ದು, ಅತ್ಯಂತ ಮಹತ್ವದ ಮೈಲಿಗಲ್ಲು” ಎಂದು ಯಶಸ್ವಿ ಉಡ್ಡಯನದ ನಂತರ ನಾರಾಯಣನ್ ಮಾತನಾಡಿದರು. “ಉಡ್ಡಯನದ ದತ್ತಾಂಶಗಳು ಲಭ್ಯವಾಗಿವೆ. ವಾಹನದ ಎಲ್ಲ ವ್ಯವಸ್ಥೆಗಳು ಸಹಜ ಸ್ಥಿತಿಯಲ್ಲಿವೆ. 2025ರ ಮೊದಲ ಉಡ್ಡಯನ ಯಶಸ್ವಿಯಾಗಿರುವುದು ತುಂಬಾ ಸಂತಸ ತಂದಿದೆ” ಎಂದು ಅವರು ಹೇಳಿದರು.
ಇನ್ನು ಇಸ್ರೋ ನೂತನ ಅಧ್ಯಕ್ಷರಾಗಿ ಜನವರಿ 16ರಂದು ಅಧಿಕಾರ ಸ್ವೀಕರಿಸಿದ ವಿ.ನಾರಾಯಣನ್ ಅವರ ನಾಯಕತ್ವದಲ್ಲಿ ನಡೆದ ಮೊದಲ ಉಡ್ಡಯನ ಇದಾಗಿದೆ.
ಇದಕ್ಕೂ ಮುನ್ನ, 27.30 ಗಂಟೆಗಳ ಕೌಂಟ್‌ಡೌನ್ ಮುಗಿಯುತ್ತಿದ್ದಂತೆ ಬೆಳಗ್ಗೆ 6.23ಕ್ಕೆ ಸರಿಯಾಗಿ ಸ್ವದೇಶಿ ಮೇಲು ಹಂತದ ಕ್ರಯೋಜೆನಿಕ್ ಎಂಜಿನ್‌ನೊಂದಿಗೆ ಜಿಎಸ್‌ಎಲ್‌ವಿ ರಾಕೆಟ್ ದಟ್ಟ ಬೆಂಕಿಯನ್ನು ಉಗುಳುತ್ತಾ ಅತ್ಯಂತ ಗಾಂಭೀರ್ಯ ಠೀವಿಯೊಂದಿಗೆ ಆಗಸದೆತ್ತರಕ್ಕೆ ಚಿಮ್ಮಿತು. ಕಪ್ಪು ಮತ್ತು ಮೋಡಕವಿದ ಆಗಸದಲ್ಲಿ ಸುಮಾರು 19 ನಿಮಿಷಗಳ ಪ್ರಯಾಣದ ಬಳಿಕ ರಾಕೆಟ್ ತನ್ನೊಡಲಲ್ಲಿದ್ದ ಎನ್‌ವಿಎಸ್-02 ಉಪಗ್ರಹವನ್ನು (ಪೇಲೋಡ್) ನಿಗದಿತ ಕಕ್ಷೆಗೆ ಯಶಸ್ವಿಯಾಗಿ ಬೇರ್ಪಡಿಸಿ ತಲುಪಿಸಿತು.
ಇದು ಭಾರತೀಯ ನ್ಯಾವಿಗೇಷನ್ ಗುಚ್ಚದ 2ನೇ ಉಪಗ್ರಹವಾಗಿದ್ದು, ಇದರೊಂದಿಗೆ ಭಾರತೀಯ ಉಪ ಖಂಡದ ಬಳಕೆದಾರರು ಸೇರಿದಂತೆ ಭಾರತ ಭೂಭಾಗದಿಂದ ಸುಮಾರು 1,500 ಕಿ.ಮೀಗೂ ಹೊರತಾದ ನಿಖರ ಸ್ಥಳಗಳ ಮಾಹಿತಿ, ವೇಗ ಮತ್ತು ಸಮಯದ ನ್ಯಾವಿಗೇಷನ್ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿದೆ.
ಇಂದಿನ ಜಿಎಸ್‌ಎಲ್‌ವಿ ಎಫ್ 15 ಯೋಜನೆಯು ಜಿಎಸ್‌ಎಲ್‌ವಿ-ಎಫ್12 ಯೋಜನೆಯ ಮುಂದಿನ ಭಾಗವಾಗಿದೆ. ಜಿಎಸ್‌ಎಲ್‌ವಿ-ಎಫ್12 ರಾಕೆಟ್ ಮೇ 29, 2023ರಂದು ಎನ್‌ವಿಎಸ್ 01 ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು.
ಭೂಮಿ, ಆಕಾಶ ಮತ್ತು ನೌಕಾಯಾನ ಹಾಗು ಕೃಷಿ ಚಟುವಟಿಕೆಗಳಿಗೆ ನಿಖರ ಮಾಹಿತಿ, ನೌಕಾದಳದ ಫ್ಲೀಟ್ ನಿರ್ವಹಣೆಗೆ ಅನುಕೂಲ, ಮೊಬೈಲ್ ಸಾಧನಗಳಿಗೆ ಲೊಕೇಶನ್ ಆಧಾರಿತ ಸೇವೆಗಳ ಪೂರೈಕೆ, ಉಪಗ್ರಹಗಳಿಗೆ ಕಕ್ಷೆಯ ನಿರ್ಣಯ ಕುರಿತು ಮಾಹಿತಿ, ಇಂಟರ್ನೆಟ್ ಆಫ್ ತಿಂಗ್ಸ್ ಆಧಾರಿತ ಅಪ್ಲಿಕೇಶನ್‌ಗಳು ಹಾಗು ತುರ್ತು ಸೇವೆಗಳು, ಸಮಯದ ಸೇವೆಗಳು ದೊರೆಯಲಿವೆ ಎಂದು ಇಸ್ರೋ ತಿಳಿಸಿದೆ.
Leave a Comment