
ಮೂರನೇ ಮಹಾಯುದ್ಧ ತಡೆಯುವ ಸಾಮರ್ಥ್ಯವಿರುವುದು ನನ್ನೊಬ್ಬನಿಗೆ ಎಂದ ಡೊನಾಲ್ಡ್ ಟ್ರಂಪ್ – ಅಮೆರಿಕದ ಮಾಜಿ ಅಧ್ಯಕ್ಷ ಹೀಗಂದಿದ್ದೇಕೆ?
- ಅಂತಾರಾಷ್ಟ್ರೀಯ ಸುದ್ದಿ
- March 17, 2023
- No Comment
- 53
ನ್ಯೂಸ್ ಆ್ಯರೋ : ಎರಡು ವಿಶ್ವಯುದ್ಧಗಳನ್ನು ಕಂಡು ನಲುಗಿ ಹೋಗಿರುವ ಜಗತ್ತು ಮೂರನೇ ಮಹಾಯುದ್ಧದ ಭಯದಲ್ಲೇ ದಿನ ದೂಡುತ್ತಿದೆ. ಈ ಮಹಾಯುದ್ಧವೇ ಮನುಷ್ಯ ಸಂಕುಲದ ಭವಿಷ್ಯ ಬರೆಯಲಿದೆ ಎಂಬುದಂತೂ ಸತ್ಯ. ಇದರ ಬೆನ್ನಲ್ಲೇ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾಲಿ ಅಧ್ಯಕ್ಷ ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸುವ ವೇಳೆ ‘ಮೂರನೇ ಮಹಾಯುದ್ಧವನ್ನು ತಡೆಯುವ ಸಾಮರ್ಥ್ಯವಿರುವುದು ನನ್ನೊಬ್ಬನಿಗೆ’ ಎಂದಿರುವುದು ಸದ್ಯದ ಮಟ್ಟಿಗೆ ತೀವ್ರ ಚರ್ಚೆಗೊಳಪಟ್ಟಿದೆ.
ಅಮೇರಿಕಾದ 2024ರ ಅಧ್ಯಕ್ಷಿಯ ಚುನಾವಣೆಯ ಪ್ರಬಲ ನಾಯಕ ಎನಿಸಿಕೊಂಡಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲೋವಾದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಈ ಮಾತನ್ನು ಉದ್ಗರಿಸಿದ್ದಾರೆ.
ಟ್ರಂಪ್ ಹೇಳಿದ್ದಿಷ್ಟು!
ಡ್ರ್ಯಾಗನ್ ರಾಷ್ಟ್ರ ಚೀನಾ ಹಾಗೂ ರಷ್ಯಾ ಒಟ್ಟಾಗಿರುವುದು ಅಮೇರಿಕಾದ ಅಧ್ಯಕ್ಷ ಜೋ ಬೈಡನ್ ಅವರು ಆಡಳಿತ ವೈಫಲ್ಯಕ್ಕೆ ಜ್ವಲಂತ ಸಾಕ್ಷಿ. ಇಡೀ ಜಗತ್ತನ್ನೆ ವಿನಾಶದ ಹಾದಿಗೆ ಕೊಂಡೊಯ್ಯುವ ಪರಮಾಣು ಯುದ್ಧಕ್ಕೆ ಅಮೆರಿಕವನ್ನು ತಳ್ಳುವಂತಹ ಹಂತಕ್ಕೆ ದೇಶವನ್ನು ಈಗಿನ ಅಧ್ಯಕ್ಷ ತಂದಿಟ್ಟಿದ್ದಾರೆ. ಮೂರನೇ ವಿಶ್ವಯುದ್ಧದ ಆರಂಭದೊಂದಿಗೆ ಜೋ ಬೈಡನ್ ಸರ್ಕಾರದ ಆಯಸ್ಸು ಮುಗಿಯಲಿದೆ ಎಂದು ಟ್ರಂಪ್ ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾರೆ.
ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕಾದಲ್ಲಿ ಅತ್ಯಂತ ಲಘುವಾಗಿ ಮತ್ತು ಲಘುವಾದ ಸಂಧರ್ಭದಲ್ಲಿ ಅತ್ಯಂತ ಕಠಿಣ ತೀರ್ಮಾನಗಳನ್ನು ಕೈಗೊಳ್ಳುವುದರೊಂದಿಗೆ ಅಮೆರಿಕಾವನ್ನು ವಿಶ್ವದ ಎದುರು ಜೋ ಬೈಡನ್ ಅಪಹಾಸ್ಯಕ್ಕೆ ಗುರಿಯಾಗಿಸಿದ್ದಾರೆ ಎಂದು ಟ್ರಂಪ್ ಗುಡುಗಿದ್ದಾರೆ.
ಒಂದು ವೇಳೆ 2024ರ ಚುನಾವಣೆಯಲ್ಲಿ ನಾನು ಅಧಿಕಾರಕ್ಕೆ ಬಂದರೆ ಕೂಡಲೇ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧವನ್ನು ಅಂತ್ಯ ಕಾಣಿಸುತ್ತೇನೆ. ಅಷ್ಟು ಒಳ್ಳೆಯ ಸ್ನೇಹ ನನ್ನ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಇದ್ದು ಯುದ್ಧ ಕೊನೆಗಾಣಿಸಲು ನನಗೆ ಒಂದು ದಿನ ಸಾಕು. ಅದಾಗ್ಯೂ ನಾನು ಜಗತ್ತಿಗೆ ಭಯದ ಸಂದೇಶ ರವಾನಿಸುತ್ತಿರುವ ಈ ಯುದ್ಧ ಕೊನೆಗಾಣಲಿ ಎಂದು ಭಯಸುತ್ತೇನೆ ಎಂದರು.
ಚುನಾವಣಾ ಪ್ರಚಾರಕ್ಕೂ ಮುನ್ನ, ಸಭೆಯೊಂದರಲ್ಲಿ ಮಾತನಾಡಿದ್ದ ಟ್ರಂಪ್, ‘ಅಮೆರಿಕನ್ನರು ನಮ್ಮ ದೇಶವನ್ನು ದ್ವೇಷಿಸುವ ಹಾಗೂ ಅದನ್ನು ಸಂಪೂರ್ಣ ನಾಶಪಡಿಸಲು ಬಯಸಿರುವ ಜನರಿಂದ ಕಾಪಾಡಲು ಬಹು ದೊಡ್ಡ ಹೋರಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದೆ” ಎಂದು ತಿಳಿಸಿದ್ದಾರೆ.
ಮುಂದುವರೆದು, ‘ನಮ್ಮ ಪಕ್ಷವು ಹಿಂದೆ ಅಮೆರಿಕದ ಗಡಿಗಳನ್ನು ಮುಕ್ತಗೊಳಿಸುವ ಜಾಗತಿಕವಾದಿ ಮೂರ್ಖರಿಂದ ತುಂಬಿತ್ತು. ಆದರೆ ತಮ್ಮ ಅಮೆರಿಕ ಫಸ್ಟ್ ನೀತಿಯು ದೇಶದ ರಕ್ಷಣೆಯನ್ನು ಇಮ್ಮಡಿಗೊಳಿಸಿತು. ಜಾಗತಿಕವಾಗಿಯೂ ಅಮೆರಿಕದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ 2024ರ ಚುನಾವಣೆಗೆ ಭರ್ಜರಿ ತಯಾರಿಗಳನ್ನು ನಡೆಸುತ್ತಿರುವ ಟ್ರಂಪ್, ಮೂರನೇ ಮಹಾಯುದ್ಧವನ್ನು ತಡೆಯಬಲ್ಲ ಜಗಮಲ್ಲ ನಾನೇ ಎಂಬುದನ್ನು ಜಗತ್ತಿಗೆ ಸಾರುವುದರೊಂದಿಗೆ ಅಮೆರಿಕಾದ ಮತದಾರ ಪ್ರಭುಗಳನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ.