
ಮೊರಾಕೊದಲ್ಲಿ ಪ್ರಬಲ ಭೂಕಂಪ; 632ಕ್ಕೂ ಹೆಚ್ಚು ಮಂದಿ ಸಾವು – ನೆರವಿನ ಭರವಸೆ ನೀಡಿದ ಭಾರತ
- ಅಂತಾರಾಷ್ಟ್ರೀಯ ಸುದ್ದಿ
- September 9, 2023
- No Comment
- 51
ನ್ಯೂಸ್ ಆ್ಯರೋ : ಉತ್ತರ ಆಫ್ರಿಕಾದ ಮೊರಾಕೊದಲ್ಲಿ (Morocco) 6.8 ತೀವ್ರತೆಯ ಭೂಕಂಪ (earthquake) ಸಂಭವಿಸಿದ್ದು,632ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 153 ಮಂದಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಎಲ್ಲೆಲ್ಲಿ?
ಅಲ್-ಹೌಜ್, ಮರ್ರಾಕೇಶ್, ಔರ್ಜಾಜೆಟ್, ಅಜಿಲಾಲ್, ಚಿಚೌವಾ ಮತ್ತು ತಾರೌಡಾಂಟ್ ಪ್ರಾಂತ್ಯಗಳಲ್ಲಿ ಭೂಕಂಪ ಸಂಭವಿಸಿದೆ. ಪ್ರವಾಸಿ ತಾಣ ಮರಕೇಶ್ ನ 71 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರಬಿಂದು ಗುರುತಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಕಟ್ಟಡ ಕುಸಿದು ರಸ್ತೆಗಳಲ್ಲಿ ಅವಶೇಷಗಳು ಚದುರಿ ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಜನರು ಭಯಭೀತರಾಗಿ ಓಡುತ್ತಿರುವ ದೃಶ್ಯಗಳು ವೈರಲ್ ಆಗಿವೆ.
ಭೂಕಂಪದಿಂದಾಗಿ ಕೆಲವು ಸಮಯ ವಿದ್ಯುತ್ ಸ್ಥಗಿತಗೊಂಡಿತ್ತು ಮತ್ತು ದೂರವಾಣಿ ನೆಟ್ ವರ್ಕ್ ಕೂಡ ಸಂಪರ್ಕ ಕಡಿತಗೊಂಡಿತ್ತು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಾವು ನೋವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮೊರಾಕೊದ ಜೊತೆ ಭಾರತ ಇದೆ
ಎಕ್ಸ್ (ಟ್ವಿಟರ್) ಮೂಲಕ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊರಾಕೊ ಜನತೆಯ ಬೆಂಬಲಕ್ಕೆ ನಿಂತಿದ್ದಾರೆ. ಮೊರಾಕೊದ ಜನರೊಂದಿಗೆ ಭಾರತ ಇದೆ. ಈ ಸಂಕಷ್ಟದ ಸಮಯದಲ್ಲಿ ಸಾಧ್ಯವಿರುವ ಎಲ್ಲಾ ನೆರವು ನೀಡಲು ಭಾರತ ಸಿದ್ಧವಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.