
ಚಂದ್ರಯಾನ ಹೆಸರು ನಾಮಕರಣ ಮಾಡಿದ್ದು ಯಾರು ಗೊತ್ತೆ? – ಇಲ್ಲಿದೆ ಈ ಹೆಸರಿನ ಹಿಂದಿನ ಆಸಕ್ತಿದಾಯಕ ಕಥೆ..
- ಕೌತುಕ-ವಿಜ್ಞಾನ
- August 24, 2023
- No Comment
- 87
ನ್ಯೂಸ್ ಆ್ಯರೋ : ಭಾರತದ ಚಂದ್ರಯಾನ-3 ಚಂದ್ರನಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಿದೆ. ಈ ಮಧ್ಯೆ ದೇಶದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಹೆಸರು ಆಗಾಗ ಪ್ರಸ್ತಾವವಾಗುತ್ತಿದೆ. ಯೋಜನೆಗೆ ಚಂದ್ರಯಾನ ಎಂದು ವಾಜಪೇಯಿ ಹೆಸರಿಟ್ಟಿದ್ದು ಇದಕ್ಕೆ ಕಾರಣ. ಈ ಕುರಿತಾದ ಆಸಕ್ತಿದಾಯಕ ವಿಚಾರ ಇಲ್ಲಿದೆ.
ಮೂಲ ಹೆಸರು ಸೋಮಯಾನ

1999ರಲ್ಲಿ ಚಂದ್ರಯಾನಕ್ಕೆ ಸರಕಾರ ಅನುಮತಿ ನೀಡುತ್ತಿದ್ದಂತೆ ಅದಕ್ಕಿದ್ದ ಹೆಸರು ಸೋಮಯಾನ. ಅಂದಿನ ಪ್ರಧಾನಿಯಾಗಿದ್ದ ವಾಜಪೇಯಿ ಆ ಹೆಸರನ್ನು ಚಂದ್ರಯಾನ ಎಂದು ಬದಲಾಯಿಸಿದರು.
ದೇಶವು ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವ ಕಾರಣ ಈ ಮಿಷನ್ ಅನ್ನು ಚಂದ್ರಯಾನ ಎಂದು ಕರೆಯಬೇಕು. ಇದು ಚಂದ್ರನಲ್ಲಿ ಅನ್ವೇಷಣೆ ಮಾಡುತ್ತದೆ. ಇದನ್ನು ಸೋಮಯಾನ ಎಂದು ಕರೆಯಬಾರದೆಂದು ವಾಜಪೇಯಿ ಹೇಳಿದ್ದರು ಎಂದು ಇಸ್ರೋ ಅಂದಿನ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಹೇಳಿದ್ದರು.
2003ರಲ್ಲಿ 56ನೇ ಸ್ವಾತಂತ್ರ್ಯ ದಿನಾಚರಣೆಯಂದು ಮಾತನಾಡಿದ ವಾಜಪೇಯಿ ಭಾರತದ ಚೊಚ್ಚಲ ಚಂದ್ರನ ಪರಿಶೋಧನಾ ಪ್ರಯತ್ನ-ಚಂದ್ರಯಾನ-1 ಅನ್ನು ಪರಿಚಯಿಸಿದರು. ನಮ್ಮ ದೇಶ ಈಗ ವಿಜ್ಞಾನ ಕ್ಷೇತ್ರದಲ್ಲಿ ಎತ್ತರಕ್ಕೆ ಹಾರಲು ಸಿದ್ದವಾಗಿದೆ. ಭಾರತ 2008ರ ವೇಳೆಗೆ ತನ್ನ ಬಾಹ್ಯಾಕಾಶ ನೌಕೆಯನ್ನು ಚಂದ್ರನತ್ತ ಕಳುಹಿಸಲಿದೆ ಎಂದು ಘೋಷಿಸಲು ಸಂತೋಷವಾಗಿದೆ ಎಂದು ಅವರು ಹೇಳಿದ್ದರು.