ಮುಂದುವರೆದ ಭಾರತ-ಕೆನಡಾ ಸಂಘರ್ಷ; ರಾತ್ರಿ 11.59ರೊಳಗೆ ದೇಶ ಬಿಟ್ಟು ಹೋಗುವಂತೆ ಭಾರತ ಕಟ್ಟಪ್ಪಣೆ

India-Canada row
Spread the love

ನ್ಯೂಸ್ ಆ್ಯರೋ: ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ವಿಚಾರವಾಗಿ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಂಘರ್ಷ ಮತ್ತೆ ಭುಗಿಲೆದ್ದಿದೆ. ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಭಾರತದಲ್ಲಿರುವ ಕೆನಡಾದ 6 ರಾಜತಾಂತ್ರಿಕ ಅಧಿಕಾರಿಗಳನ್ನು ದೇಶದಿಂದ ಹೊರಕಳುಹಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಇದೇ ವೇಳೆ, ಕೆನಡಾ ಸರ್ಕಾರ ಕೂಡಾ ಭಾರತದ 6 ಮಂದಿ ರಾಜತಾಂತ್ರಿಕ ಅಧಿಕಾರಿಗಳನ್ನು ಹೊರಹಾಕುವ ತೀರ್ಮಾನ ಪ್ರಕಟಿಸಿದೆ.

ಹೌದು. . ಭಾರತದಲ್ಲಿ ಕೆನಡಾದ ರಾಜತಾಂತ್ರಿಕರು ಅಕ್ಟೋಬರ್ 19ಕ್ಕೆ ಮುನ್ನ ಅಥವಾ ಅಂದು ರಾತ್ರಿ 11.59ರೊಳಗೆ ದೇಶ ಬಿಡುವಂತೆ ಕೇಂದ್ರ ಸರ್ಕಾರ ಕಟ್ಟಪ್ಪಣೆ ಹೊರಡಿಸಿದೆ. ಅಷ್ಟೇ ಅಲ್ಲದೇ, ಕೆನಡಾದಲ್ಲಿರುವ ತನ್ನ ಹೈಕಷಮಿನರ್ ಮತ್ತು ಇತರೆ ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಳ್ಳಲು ನಿರ್ಧರಿಸಿದೆ. ಪ್ರಧಾನಿ ಜಸ್ಟಿನ್ ಟ್ರೂಡೋ ನೇತೃತ್ವದ ಕೆನಡಾ ಸರ್ಕಾರ ಭಾರತದ ವಿರುದ್ಧ ಉಗ್ರವಾದವನ್ನು ಪ್ರೋತ್ಸಾಹಿಸುತ್ತಿದೆ. ಹೀಗಾಗಿ ಇದಕ್ಕೆ ಪ್ರತ್ಯುತ್ತರವಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಭಾರತ ಹೊಂದಿದೆ ಎಂದು ಖಾರವಾಗಿ ತಿಳಿಸಿದೆ.

ಹಂಗಾಮಿ ಹೈ ಕಮಿಷನರ್ ಸ್ಟೀವರ್ಟ್ ರಾಸ್ ವೀಲರ್, ಡೆಪ್ಯುಟಿ ಹೈ ಕಮಿಷನರ್ ಪ್ಯಾಟ್ರಿಕ್ ಹೆಬರ್ಟ್, ಫಸ್ಟ್ ಸೆಕ್ರೆಟರಿ ಮೇರಿ ಕ್ಯಾಥರೀನ್ ಜೊಲ್ಲಿ, ಲ್ಯಾನ್ ರಾಸ್ ಡೇವಿಡ್ ಟ್ರಿಟ್ಸ್, ಆಡಮ್ ಜೇಮ್ಸ್ ಚುಪ್ಕಾ ಮತ್ತು ಪೌಲಾ ಓರ್ಜುಯೆಲಾ ಭಾರತವನ್ನು ತೊರೆಯುವಂತೆ ಖಡಕ್ ಸೂಚನೆ ನೀಡಲಾಗಿದೆ.

ಇನ್ನೊಂದೆಡೆ, ಕೆನಡಾ ಕೂಡಾ ತಕ್ಷಣವೇ ಕ್ರಮಕ್ಕೆ ಮುಂದಾಗಿದ್ದು, ಭಾರತದ ಆರು ಮಂದಿ ರಾಜತಾಂತ್ರಿಕರನ್ನು ದೇಶದಿಂದ ಹೊರ ಹಾಕುವ ನಿರ್ಧಾರವನ್ನು ಪ್ರಕಟಿಸಿತು. ಈ ಕುರಿತು ರಾಯಿಟರ್ಸ್‌ ಸುದ್ದಿಸಂಸ್ಥೆ ವರದಿ ಪ್ರಕಟಿಸಿದೆ. ಭಾರತದ ರಾಜತಾಂತ್ರಿಕರು ಭಾರತದ ಪರವಾಗಿ ‘ಹಿಂಸೆಗೆ ಪ್ರಚೋದನೆ’ ನೀಡುವ ಕೆಲಸದಲ್ಲಿ ನಿರತರಾಗಿರುವ ಬಗ್ಗೆ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದಾರೆ ಎಂದು ಆರೋಪಿಸಿದೆ.

ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವೇನು?:

ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತ ಕೊಲೆ ಪ್ರಕರಣದಲ್ಲಿ ಭಾರತದ ಕೈವಾಡ ಇದೆ ಎಂದು ಕಳೆದ ವರ್ಷದ ಕೆನಡಾ ಸಂಸತ್ತಿನಲ್ಲಿ ಪ್ರಧಾನಿ ಜಸ್ಟಿನ್ ಟ್ರೂಡೊ ಗಂಭೀರ ಆರೋಪ ಮಾಡಿದ್ದರು. ಇದಾದ ನಂತರ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧ ಹಳಸಿದೆ. ಈ ಆರೋಪಗಳನ್ನು ಸಾರಾಸಗಟಾಗಿ ಅಲ್ಲಗಳೆದಿರುವ ಭಾರತ, ‘ಪ್ರಚೋದಿತ’ ಮತ್ತ ‘ಅಸಂಬಂಧ’ ಎಂದು ಹೇಳಿತ್ತು. ಜೊತೆಗೆ, ಭಾರತ ವಿರೋಧಿ ಶಕ್ತಿಗಳಿಗೆ ಕೆನಡಾ ಆಶ್ರಯ ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿತ್ತು. ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತನನ್ನು ‘ಉಗ್ರ’ ಎಂದು 2020ರಲ್ಲಿ ಭಾರತದ ರಾಷ್ಟ್ರೀಯ ತನಿಖಾ ದಳ (NIA) ಘೋಷಿಸಿದೆ. ಈತನನ್ನು ಕಳೆದ ಜೂನ್‌ನಲ್ಲಿ ಕೆನಡಾದ ಸರ್ರೆ ಎಂಬಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

Leave a Comment

Leave a Reply

Your email address will not be published. Required fields are marked *

error: Content is protected !!