ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಎಷ್ಟು ಒಳ್ಳೆಯದು; ಪಾರ್ಶ್ವವಾಯುವಿನ ಅಪಾಯ ಆಗಬಹುದೇ ?
ನ್ಯೂಸ್ ಆ್ಯರೋ: ಚಳಿಗಾಲದ ಸಮಯದಲ್ಲಿ ಅದರಲ್ಲೂ ಮೈ ಕೊರೆಯುವ ಚಳಿ ಇದ್ದಾಗಲೂ ಕೂಡ ಅನೇಕರು ತಣ್ಣೀರಿನಿಂದ ಸ್ನಾನ ಮಾಡಲು ಇಷ್ಟಪಡುತ್ತಾರೆ. ಕೆಲವು ಬಾರಿ ಈ ರೀತಿಯ ಅಭ್ಯಾಸ ಆರೋಗ್ಯಕ್ಕೂ ಅಪಾಯಕಾರಿಯಾಗಬಹುದು. ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದು ಸತ್ಯ. ಕೆಲವು ಸಂಶೋಧನೆಗಳಿಂದಲೂ ಇದು ಸಾಬೀತಾಗಿದೆ.
ಸಾಮಾನ್ಯವಾಗಿ ಮೆದುಳಿಗೆ ರಕ್ತದ ಹರಿವು ನಿಧಾನವಾದಾಗ ಅಥವಾ ನಿಂತಾಗ, ಮೆದುಳಿನ ಕೆಲವು ಭಾಗಗಳಿಗೆ ಆಮ್ಲಜನಕ ತಲುಪುವುದು ತಡವಾದಾಗ ಪಾರ್ಶ್ವವಾಯು ಸಂಭವಿಸುತ್ತದೆ. ಈ ಸ್ಥಿತಿಯು ಅತ್ಯಂತ ಅಪಾಯಕಾರಿಯಾಗಿದ್ದು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯ ಸಾವಿಗೆ ಕಾರಣವಾಗಬಹುದು. ಹಾಗಾದರೆ ತಣ್ಣೀರು ಮೆದುಳಿನ ಪಾರ್ಶ್ವವಾಯುವಿನ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ? ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.
ಹಿರಿಯ ವೈದ್ಯ ಡಾ. ಅಜಯ್ ಕುಮಾರ್ ಅವರು ಹೇಳುವ ಪ್ರಕಾರ, ತಣ್ಣೀರನ್ನು ನೇರವಾಗಿ ತಲೆಗೆ ಸುರಿದುಕೊಳ್ಳುವುದರಿಂದ ಮೆದುಳಿನ ಪಾರ್ಶ್ವವಾಯು ಅಪಾಯ ಹೆಚ್ಚಾಗಬಹುದು. ಇದಕ್ಕೆ ಕಾರಣವೆಂದರೆ ನೀವು ನೇರವಾಗಿ ತಲೆಯ ಮೇಲೆ ತಣ್ಣೀರನ್ನು ಸುರಿದಾಗ, ಮೆದುಳಿನ ನರಗಳು ಇದ್ದಕ್ಕಿದ್ದಂತೆ ಕುಗ್ಗುತ್ತವೆ, ಇದು ರಕ್ತ ಪರಿಚಲನೆಯ ಅಡಚಣೆಗೆ ಕಾರಣವಾಗಬಹುದು. ಇದಲ್ಲದೆ, ತಣ್ಣೀರಿನಿಂದ ಸ್ನಾನ ಮಾಡುವುದರಿಂದ ದೇಹದ ತಾಪಮಾನವು ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ದೌರ್ಬಲ್ಯ, ಆಯಾಸ, ತಲೆ ತಿರುಗುವಿಕೆ, ಹೃದಯಾಘಾತ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳು ಉಂಟಾಗಬಹುದು ಹಾಗಾಗಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದಿದ್ದಾರೆ.
ತಣ್ಣೀರಿನಿಂದ ಸ್ನಾನ ಮಾಡುವಾಗ ಕೈಗಳು, ಪಾದಗಳು ಮತ್ತು ಬೆನ್ನಿನಂತಹ ದೇಹದ ಇತರ ಭಾಗಗಳಿಗೆ ನೀರನ್ನು ಸುರಿಯುವುದು ಒಳ್ಳೆಯದು ಮತ್ತು ಸುರಕ್ಷಿತ . ಈ ರೀತಿ ಮಾಡುವುದರಿಂದ, ದೇಹದ ತಾಪಮಾನವು ಸಮತೋಲನಗೊಳ್ಳುತ್ತದೆ. ನಂತರ ನೀರನ್ನು ತಲೆಗೆ ಹಾಕಿಕೊಳ್ಳಬಹುದು. ಈ ರೀತಿಯಾಗಿ, ತಣ್ಣೀರಿನ ಸ್ನಾನ ಮಾಡಬಹುದು.
ನಿಮ್ಮ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ ಅಥವಾ ನಿಮಗೆ ಬೇಗ ಶೀತ ಆಗುತ್ತಿದ್ದರೆ, ತಣ್ಣೀರಿನಿಂದ ಸ್ನಾನ ಮಾಡುವುದರಿಂದ ಶೀತ, ಜ್ವರ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಇದಲ್ಲದೆ, ನೀವು ಅಧಿಕ ರಕ್ತದೊತ್ತಡ, ಹೃದ್ರೋಗವನ್ನು ಹೊಂದಿದ್ದರೆ, ತಣ್ಣೀರಿನಿಂದ ಸ್ನಾನ ಮಾಡುವುದು ನಿಮಗೆ ಅಪಾಯಕಾರಿ. ಈ ಸಂದರ್ಭಗಳಲ್ಲಿ, ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ತಣ್ಣೀರಿನಿಂದ ಸ್ನಾನ ಮಾಡುವ ಅಭ್ಯಾಸವನ್ನು ಅಳವಡಿಸಿಕೊಳ್ಳಿ.
Leave a Comment