Mumbai Mail Accident : ಹಳಿ ತಪ್ಪಿದ ರೈಲಿಗೆ ಹೌರಾ-ಮುಂಬೈ ಮೇಲ್ ರೈಲು ಢಿಕ್ಕಿ – ತಪ್ಪಿದ ಭಾರೀ ಅನಾಹುತ, ಹಲವರಿಗೆ ಗಾಯ
ನ್ಯೂಸ್ ಆ್ಯರೋ : ದೇಶದಲ್ಲಿ ರೈಲುಗಳ ನಡುವಿನ ಢಿಕ್ಕಿ ವರದಿಗಳು ಹೆಚ್ಚಾಗುತ್ತಿರುವ ನಡುವೆಯೇ ಜಾರ್ಖಂಡ್‌ನಲ್ಲಿ ಗೂಡ್ಸ್ ರೈಲಿಗೆ ಹೌರಾ-ಮುಂಬೈ ಎಕ್ಸ್ ಪ್ರೆಸ್ ಢಿಕ್ಕಿ ಹೊಡೆದು ಸುಮಾರು 14 ಬೋಗಿಗಳು ಹಳಿತಪ್ಪಿ ಪಲ್ಟಿಯಾಗಿವೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಬೆಳಗಿನ ಜಾವ 3.30ರ ಸುಮಾರಿಗೆ ರಾಜ್‌ಖರ್ಸ್ವಾನ್ ಮತ್ತು ಬಡಬಾಂಬೋ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ಸಮಯದಲ್ಲಿ ಹೌರಾ ಮೇಲ್ ಪಶ್ಚಿಮ ಬಂಗಾಳದ ಹೌರಾದಿಂದ CSMT ಮುಂಬೈಗೆ ಪ್ರಯಾಣಿಸುತ್ತಿತ್ತು.
ರೈಲ್ವೇ ಅಧಿಕಾರಿಗಳ ಪ್ರಕಾರ, ಜಾರ್ಖಂಡ್‌ನಲ್ಲಿ ರೈಲು ರಾಜಖರ್‌ಸ್ವಾನ್‌ನಿಂದ ಬಡಬಾಂಬೊಗೆ ಪ್ರಯಾಣಿಸುತ್ತಿದ್ದಾಗ ರೈಲು ಅಪಘಾತ ಸಂಭವಿಸಿದೆ. ಚಕ್ರಧರಪುರದಲ್ಲಿ ಗೂಡ್ಸ್ ರೈಲು ಹಳಿತಪ್ಪಿದ್ದು, ಗೂಡ್ಸ್ ರೈಲಿನ ಬೋಗಿಗಳು ಮತ್ತೊಂದು ಹಳಿಯಲ್ಲಿ ಪಲ್ಟಿಯಾಗಿದೆ. ಇದೇ ವೇಳೆ ಹಿಂದಿನಿಂದ ಅದೇ ಮಾರ್ಗವಾಗಿ ಬಂದ ಹೌರಾ-ಮುಂಬೈ ಮೇಲ್ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಸಂಪೂರ್ಣ ಬೋಗಿ ಹಳಿತಪ್ಪಿದೆ. ಆದರೆ ಹೌರಾ ಮೇಲ್ ಚಾಲಕನಿಗೆ ಸಕಾಲದಲ್ಲಿ ಈ ಅಪಘಾತದ ಅರಿವಾಯಿತು. ಚಾಲಕನ ಬುದ್ಧಿಮತ್ತೆಯಿಂದ ಪ್ರಯಾಣಿಕರಲ್ಲಿ ಹೆಚ್ಚಿನ ಸಾವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಈ ರೈಲ್ವೇ ಅಪಘಾತದಿಂದಾಗಿ ಹಲವು ರೈಲುಗಳು ರದ್ದಾಗಿವೆ, ಹಲವು ರೈಲುಗಳನ್ನು ಅಲ್ಪಾವಧಿಗೆ ನಿಲ್ಲಿಸಲಾಗಿದೆ. ಈ ರೈಲು ಅಪಘಾತದಿಂದ ಅಲ್ಲಿ ಸಿಲುಕಿರುವ ಜನರನ್ನು ಬಸ್‌ಗಳ ಮೂಲಕ ಹತ್ತಿರದ ಮತ್ತೊಂದು ರೈಲು ನಿಲ್ದಾಣಕ್ಕೆ ಕಳುಹಿಸಲಾಗಿದೆ. 22861 ಹೌರಾ-ಕಾಂತಬಾಜಿ ಎಕ್ಸ್‌ಪ್ರೆಸ್, 08015/18019 ಖರಕ್‌ಪುರ-ಧನ್‌ಬಾದ್ ಎಕ್ಸ್‌ಪ್ರೆಸ್, 12021/12022 ಹೌರಾ ಬಾರ್ಬಿಲ್ ಎಕ್ಸ್‌ಪ್ರೆಸ್ ಈ ಮಾರ್ಗದಲ್ಲಿ ಓಡುವುದನ್ನು ರದ್ದುಗೊಳಿಸಬೇಕಾಗಿತ್ತು. ಆದರೆ ಕೆಲವು ರೈಲುಗಳನ್ನು ಮಧ್ಯದಲ್ಲೇ ನಿಲ್ಲಿಸಲಾಗಿದೆ.
ಕಳೆದ ತಿಂಗಳು 20 ರಂದು ಪಶ್ಚಿಮ ಬಂಗಾಳದಲ್ಲಿ ಬಹುತೇಕ ಇದೇ ರೀತಿಯ ಅಪಘಾತ ಸಂಭವಿಸಿತ್ತು. ಕಾಂಚನ್ ಜಂಗಾ ಎಕ್ಸ್‌ಪ್ರೆಸ್ ಅಪಘಾತದಲ್ಲಿ ಹತ್ತು ಮಂದಿ ಸಾವನ್ನಪ್ಪಿದ್ದು ಆ ಅಪಘಾತದ ತಿಂಗಳ ನಂತರ ಮತ್ತೊಂದು ಮಾರಣಾಂತಿಕ ರೈಲು ಅಪಘಾತ ಸಂಭವಿಸಿತ್ತು.
Leave a Comment