ಇಸ್ರೋ ಸ್ಪೇಡೆಕ್ಸ್‌ ಮಿಷನ್‌ ಯಶಸ್ವಿ; ಬಾಹ್ಯಾಕಾಶದಲ್ಲಿ ಉಪಗ್ರಹಗಳ ಡಾಕಿಂಗ್‌ ಪೂರ್ಣ

N Space
Spread the love

ನ್ಯೂಸ್ ಆ್ಯರೋ: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಗುರುವಾರ ಮುಂಜಾನೆ ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಪರಸ್ಪರ ಡಾಕಿಂಗ್‌ ಮಾಡುವ ಮೂಲಕ ಐತಿಹಾಸಿಕ ವಿಕ್ರಮ ಸಾಧಿಸಿತು. ಸ್ಪೇಸ್‌ ಡಾಕಿಂಗ್‌ ಎಕ್ಸೀಪಿರಿಮೆಂಟ್‌ ಅಥವಾ ಸ್ಪೇಡೆಕ್ಸ್‌ ಎಂದು ಇದನ್ನು ಇಸ್ರೋ ಕರೆದಿತ್ತು. ನಾಲ್ಕನೇ ಯತ್ನದಲ್ಲಿ ಭಾರತದ ವಿಜ್ಞಾನಿಗಳು ಅತ್ಯಂತ ಯಶಸ್ವಿಯಾಗಿ ಸ್ಪೇಡೆಕ್ಸ್‌ ಮಿಷನ್‌ನಲ್ಲಿದ್ದ ಚೇಸರ್‌ ಹಾಗೂ ಟಾರ್ಗೆಟ್‌ ನೌಕೆಗಳನ್ನು ಡಾಕಿಂಗ್‌ ಮಾಡುವಲ್ಲಿ ಯಶಸ್ವಿಯಾಯಿತು. ಇಂದು ಮುಂಜಾನೆ 10 ಗಂಟೆಯ ವೇಳೆಗೆ ಇಸ್ರೋ ತನ್ನ ಡಾಕಿಂಗ್‌ ಪ್ರಯೋಗ ಯಶಸ್ವಿಯಾಗಿದೆ ಎಂದು ಘೋಷಣೆ ಮಾಡಿತು.

‘ಬಾಹ್ಯಾಕಾಶ ನೌಕೆಗಳ ಡಾಕಿಂಗ್‌ ಪ್ರಯೋಗ ಯಶಸ್ವಿಯಾಗಿದೆ. ಇದು ಐತಿಹಾಸಿಕ ಕ್ಷಣ. ಸ್ಪೇಡೆಕ್ಸ್‌ನ ಡಾಕಿಂಗ್‌ ಪ್ರಕ್ರಿಯೆಯ ಬಗ್ಗೆ ಮಾತನಾಡುವುದಾದರೆ, 15 ಮೀ ನಿಂದ 3 ಮೀ ಹೋಲ್ಡ್ ಪಾಯಿಂಟ್‌ವರೆಗಿನ ಕುಶಲತೆಯು ಪೂರ್ಣಗೊಂಡಿದೆ. ಡಾಕಿಂಗ್ ಅನ್ನು ನಿಖರವಾಗಿ ಪ್ರಾರಂಭಿಸಲಾಯಿತು, ಇದು ಯಶಸ್ವಿ ಬಾಹ್ಯಾಕಾಶ ನೌಕೆ ಡಾಕಿಂಗ್‌ಹೆ ಕಾರಣವಾಯಿತು. ಆ ಬಳಿಕ ಹಿಂತೆಗೆದುಕೊಳ್ಳುವಿಕೆ ಕೂಡ ಸರಾಗವಾಗಿ ಪೂರ್ಣಗೊಂಡಿತು, ನಂತರ ಎರಡೂ ನೌಕೆಗಳನ್ನು ಸ್ಥಿರವಾಗಿ ಬಿಗಿ ಹಿಡಿಯುವ ಮೂಲಕ ಡಾಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿತು. ಯಶಸ್ವಿ ಬಾಹ್ಯಾಕಾಶ ಡಾಕಿಂಗ್ ಸಾಧಿಸಿದ 4 ನೇ ದೇಶ ಭಾರತವಾಯಿತು. ಇಡೀ ತಂಡಕ್ಕೆ ಅಭಿನಂದನೆಗಳು! ಭಾರತಕ್ಕೆ ಅಭಿನಂದನೆಗಳು!’ ಎಂದು ಇಸ್ರೋ ಟ್ವೀಟ್‌ ಮಾಡಿದೆ.

ಡಾಕಿಂಗ್ ಬಹಳ ಸಂಕೀರ್ಣ ಪ್ರಕ್ರಿಯೆಯಾಗಿದ್ದು, ಇಸ್ರೋ ಹದಿನೈದು ದಿನಗಳಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿ ಎಚ್ಚರಿಕೆಯಿಂದ ಇದನ್ನು ಪ್ರಯತ್ನಿಸಿತು. ಚೇಸರ್‌ ಹಾಗೂ ಟಾರ್ಗೆಟ್‌ ನೌಕೆಗಳು ಪರಸ್ಪರ ಟಾರ್ಗೆಟ್‌ ಆಗುವ ಮುನ್ನ ಭಾರತವು ಈ ಸಾಧನೆಯನ್ನು ಮಾಡಲು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಭಾರತೀಯ ಡಾಕಿಂಗ್‌ ಸಿಸ್ಟಮ್‌ಅನ್ನು ಬಳಸಿತು.

ಭೂಮಿಯಿಂದ 475 ಕಿಲೋಮೀಟರ್ ಎತ್ತರದ ಕಕ್ಷೆಯಲ್ಲಿರುವ ಎರಡು ಭಾರತೀಯ ನೌಕೆಗಳನ್ನು ಡಾಕಿಂಗ್ ಮಾಡುವಲ್ಲಿ ಇಸ್ರೋ ಯಶಸ್ವಿಯಾಗಿದೆ. ರಷ್ಯಾ, ಯುಎಸ್ಎ ಮತ್ತು ಚೀನಾ ನಂತರ ಡಾಕಿಂಗ್ ಅನ್ನು ಯಶಸ್ವಿಯಾಗಿ ಮಾಡಿದ ನಾಲ್ಕನೇ ದೇಶ ಭಾರತವಾಗಿದೆ. ಭಾರತವು 2024ರ ಡಿಸೆಂಬರ್ 30 ರಂದು ಪಿಎಸ್ಎಲ್‌ವಿ ರಾಕೆಟ್ ಬಳಸಿ ಸ್ಪೇಡೆಕ್ಸ್‌ ಮಿಷನ್ ಅನ್ನು ಪ್ರಾರಂಭಿಸಿತು. ಚಂದ್ರಯಾನ-4 ಮತ್ತು ಭಾರತೀಯ ಅಂತರಿಕ್ಷ ನಿಲ್ದಾಣದಂತಹ ಭವಿಷ್ಯದ ಕಾರ್ಯಾಚರಣೆಗಳಿಗೆ ಡಾಕಿಂಗ್‌ ಪ್ರಮುಖ ತಂತ್ರಜ್ಞಾನವಾಗಿದೆ.

ಜನವರಿ 12ರಂದು, ಕೊನೆಯ ಪ್ರಯತ್ನ ಮಾಡಿದಾಗ, ಇಸ್ರೋ ಬಾಹ್ಯಾಕಾಶದಲ್ಲಿ ಎರಡು ನೌಕೆಗಳ “ರೋಮಾಂಚಕಾರಿ ಹ್ಯಾಂಡ್‌ಶೇಕ್” ಎಂದು ವಿವರಿಸಿದ್ದನ್ನು ಸಾಧಿಸಲು ಉಪಗ್ರಹಗಳನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸಲಾಯಿತು. ನಂತರ ಬಾಹ್ಯಾಕಾಶ ಡಾಕಿಂಗ್‌ಗಾಗಿ ಪರೀಕ್ಷಾ ಪ್ರಯತ್ನದಲ್ಲಿ ಎರಡು ಭಾರತೀಯ ನೌಕೆಗಳು ಮೂರು ಮೀಟರ್‌ಗಳಷ್ಟು ಹತ್ತಿರಕ್ಕೆ ಬಂದವು ಮತ್ತು ಈಗ ಅವು ಹಿಂದೆ ಸರಿಯುತ್ತಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಂದು ಬೆಳಿಗ್ಗೆ ತಿಳಿಸಿದೆ.

“15 ಮೀ ಮತ್ತು ಅದಕ್ಕಿಂತ ಹೆಚ್ಚು 3 ಮೀ ತಲುಪಲು ಪ್ರಾಯೋಗಿಕ ಪ್ರಯತ್ನ ಮಾಡಲಾಗಿದೆ. ಬಾಹ್ಯಾಕಾಶ ನೌಕೆಗಳನ್ನು ಸುರಕ್ಷಿತ ದೂರಕ್ಕೆ ಹಿಂದಕ್ಕೆ ಸರಿಸಲಾಗಿದೆ. ಡೇಟಾವನ್ನು ಮತ್ತಷ್ಟು ವಿಶ್ಲೇಷಿಸಿದ ನಂತರ ಡಾಕಿಂಗ್ ಪ್ರಕ್ರಿಯೆಯನ್ನು ಮಾಡಲಾಗುತ್ತದೆ” ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜನವರಿ 12 ರ ತನ್ನ ಕೊನೆಯ ಅಪ್‌ಡೇಟ್‌ನಲ್ಲಿ ಸ್ಪೇಸ್ ಡಾಕಿಂಗ್ ಪ್ರಯೋಗ (ಸ್ಪಾಡೆಕ್ಸ್) ಕಾರ್ಯಾಚರಣೆಯ ಕುರಿತು ತಿಳಿಸಿತ್ತು.

ಇನ್ನು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ನೌಕೆಗಳ ಬಾಹ್ಯಾಕಾಶ ಡಾಕಿಂಗ್‌ನ ಯಶಸ್ವಿ ಸಾಧನೆಗಾಗಿ ಇಸ್ರೋ ವಿಜ್ಞಾನಿಗಳು ಮತ್ತು ಇಡೀ ಬಾಹ್ಯಾಕಾಶ ಸಮುದಾಯವನ್ನು ಅಭಿನಂದಿಸಿದರು. “ಮುಂದಿನ ವರ್ಷಗಳಲ್ಲಿ ಭಾರತದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯಾತ್ರೆಗಳಿಗೆ ಇದು ಮಹತ್ವದ ಮೆಟ್ಟಿಲು” ಎಂದು ಅವರು ಹೇಳಿದ್ದಾರೆ.

Leave a Comment

Leave a Reply

Your email address will not be published. Required fields are marked *