ದಸರಾ ಆನೆ ರಂಪಾಟ: ದಿಕ್ಕಾಪಾಲಾಗಿ ಓಡಿದ ಜನ

ನ್ಯೂಸ್ ಆ್ಯರೋ: ಮಂಡ್ಯ: ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಹಿರಣ್ಯ ಹೆಣ್ಣಾನೆ ಇಂದು ಕೆಲಕಾಲ ಆತಂಕ ಸೃಷ್ಟಿಸಿತು. ನಂತರ ಮಾವುತ ಹಾಗೂ ಕಾವಾಡಿಗಳು ಆನೆಯನ್ನು ಸಮಾಧಾನಪಡಿಸಿದ್ದಾರೆ.
ರಂಗನಾಥ ಮೈದಾನದಿಂದ ಬನ್ನಿಮಂಟಪಕ್ಕೆ ಬರುವ ವೇಳೆ ಲಾರಿ ಹತ್ತಲು ಹೋಗಿ ಅಲ್ಲಿಯೇ ಇದ್ದ ಬಿಳಿ ಕುದುರೆಯನ್ನು ನೋಡಿ ಹಿರಣ್ಯ ಬೆಚ್ಚಿ ಓಡಿದ್ದಳು. ಜನರೂ ಕೂಡ ದಿಕ್ಕಾಪಾಲಾಗಿ ಓಡಿದರು.
ಈ ಕುರಿತು ಡಿಎಫ್ಒ ಡಾ.ಪ್ರಭುಗೌಡ ಮಾತನಾಡಿ, “ಶ್ರೀರಂಗಪಟ್ಟಣಕ್ಕೆ ಮಹೇಂದ್ರ, ಹಿರಣ್ಯ, ಲಕ್ಷ್ಮಿ ಆನೆಗಳನ್ನು ಕರೆತಂದು ದಸರಾ ಆಚರಣೆ ಮಾಡುತ್ತಿದ್ದೇವೆ. ಲಾರಿ ಹತ್ತುವಾಗ ಸಾಮಾನ್ಯವಾಗಿ ಹಿರಣ್ಯ ಆನೆಗೆ ಹಿಂಜರಿಕೆ ಇರುತ್ತದೆ. ಕ್ಯಾಂಪ್‌ನಲ್ಲಿರುವಾಗಲೂ ಒಂದೂವರೆ ಗಂಟೆ ತೆಗೆದುಕೊಂಡಿತ್ತು. ಇವತ್ತು ಲಾರಿ ಇಳಿದು ಬಂದ ನಂತರ ಮಾವುತರು ಅದನ್ನು ಮತ್ತೆ ಸಮಾಧಾನಪಡಿಸಿ ಹತ್ತಿಸಿದರು” ಎಂದರು.
ಇನ್ನು ಜಂಬೂಸವಾರಿಯಲ್ಲಿ ಅಂಬಾರಿ ಆನೆ ಮಹೇಂದ್ರನಿಗೆ ಅಕ್ಕಪಕ್ಕದಲ್ಲಿ ಹಿರಣ್ಯ, ಲಕ್ಷ್ಮಿ ಆನೆಗಳು ಸಾಥ್ ನೀಡಿದವು. ಬನ್ನಿಮಂಟಪದಿಂದ ಬ್ಯಾಂಡ್, ಪೂಜಾ ಕುಣಿತ, ವೀರಗಾಸೆ, ನಗಾರಿ, ಜಡೆಕೋಲಾಟ, ಗಾರುಡಿಗೊಂಬೆ, ತಮಟೆ, ದೊಣ್ಣೆವರಸೆ ಸೇರಿದಂತೆ ಸ್ತಬ್ದಚಿತ್ರಗಳ ಮೆರವಣಿಗೆ ರಂಗನಾಥ ದೇವಾಲಯದವರೆಗೆ ಸಾಗಿತು.
Leave a Comment