ಚಳಿಗಾಲದಲ್ಲಿ ತಪ್ಪದೇ ಸಿಹಿ ಗೆಣಸು ಸೇವಿಸಿ; ದೇಹದಲ್ಲಾಗುವ ಆರೋಗ್ಯಕರ ಚಮತ್ಕಾರ ನೋಡಿ
ನ್ಯೂಸ್ ಆ್ಯರೋ: ಸಿಹಿ ಗೆಣಸು ಒಂದು ಜಾತಿಯ ಗೆಡ್ಡೆ. ಇದು ಗೆಡ್ದೆ ಜಾತಿಯ ತರಕಾರಿಗಳಲ್ಲಿ ಪ್ರಮುಖವಾದುದು. ಇದರಿಂದ ತುಂಬಾನೇ ಆರೋಗ್ಯ ಪ್ರಯೋಜನಗಳಿವೆ, ಇದರಲ್ಲಿ ಯಥೇಚ್ಚವಾದ ಪೋಷಕಾಂಶಗಳು ತುಂಬಿದೆ. ಚಳಿಗಾಲಕ್ಕೆ ಗೆಣಸು ಹೇಳಿ ಮಾಡಿಸಿದ ಆಹಾರ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಇದರಲ್ಲಿನ ಪೌಷ್ಟಿಕ ಸತ್ವವು ದೇಹ ಹಾಗು ಚರ್ಮಕ್ಕೆ ಬೇಕಾದ ತೇವಾಂಶವನ್ನು ನೀಡುತ್ತದೆ.
ಹೆಸರೇ ಸೂಚಿಸುವಂತೆ ಸಿಹಿ ಗೆಣಸು ಸ್ವಾಭಾವಿಕವಾಗಿ ಸಿಹಿ ರುಚಿಯನ್ನ ಹೊಂದಿರುತ್ತವೆ. ಗೆಣಸು ಬಿ1, ಬಿ2, ಬಿ3, ಬಿ6, ಬಿ9, ಕ್ಯಾಲ್ಸಿಯಂ, ಸೋಡಿಯಂ, ಝಿಂಕ್, ಮೆಗ್ನಿಶಿಯಂ ಇನ್ನು ಅನೇಕ ಪೋಷಕಾಂಶಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ.
ಇನ್ನು ಸಿಹಿಗೆಣಸಿನಲ್ಲಿ ಪೋಷಕಾಂಶಗಳ ಕೊರತೆ ಇಲ್ಲ, ಇದನ್ನು ತಿಂದರೆ ದೇಹಕ್ಕೆ ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಶಿಯಂ ಮತ್ತು ಫೈಬರ್ ಯಂತಹ ಪೋಷಕಾಂಶಗಳು ಹೇರಳವಾಗಿ ಸಿಗುತ್ತವೆ. ಹಸಿಯಾಗಿ ಸೇವಿಸುವುದಕ್ಕಿಂತಲೂ ಬೇಯಿಸಿ ಸೇವಿಸುವುದು ಬಹಳ ಉಪಯುಕ್ತವಾಗಿದೆ.
ದೇಹವನ್ನು ಆರೋಗ್ಯಕರವಾಗಿಡುವ ಜೊತೆ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ, ಇಲ್ಲದಿದ್ದರೆ ನಾವು ಅನೇಕ ರೋಗಗಳಿಗೆ ಒಳಗಾಗಬೇಕಾಗುತ್ತದೆ. ನಿಯಮಿತವಾಗಿ ಸಿಹಿ ಗೆಣಸನ್ನು ಸೇವಿಸಿದರೆ, ಶೀತ, ಕೆಮ್ಮು, ಜ್ವರ ಮತ್ತು ಇತರ ವೈರಲ್ ಕಾಯಿಲೆಗಳ ಅಪಾಯವು ಕಡಿಮೆಯಾಗುತ್ತದೆ. ಏಕೆಂದರೆ ವಿಟಮಿನ್ ಎ ಮತ್ತು ವಿಟಮಿನ್ ಸಿ ಈ ಆಹಾರದಲ್ಲಿ ಅಧಿಕವಾಗಿರುತ್ತದೆ.
ಗೆಣಸಿನಲ್ಲಿ ನಾರಿನ ಅಂಶ ವಿಫುಲವಾಗಿದೆ. ಹೆಚ್ಚು ನಾರು ಇರುವಂಥ ಆಹಾರಗಳು ನಮಗೆ ಹಲವು ರೀತಿಯಲ್ಲಿ ಉಪಕಾರವನ್ನು ಮಾಡಬಲ್ಲವು. ಅದರಲ್ಲೂ ಕಳ್ಳ ಹಸಿವನ್ನು ಮಟ್ಟ ಹಾಕುವಲ್ಲಿ ಇದರ ನೆರವು ಅಗತ್ಯವಾಗಿ ಬೇಕಾಗುತ್ತದೆ. ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿದ ಭಾವವನ್ನು ನೀಡುವ ಇವು, ತಿಂದ ತೃಪ್ತಿಯನ್ನು ಹೆಚ್ಚಿಸುತ್ತವೆ. ಕರಗಬಲ್ಲ ನಾರುಗಳು ದೇಹದಲ್ಲಿ ಅಡಗಿರುವ ಕೊಬ್ಬಿನಂಶವನ್ನು ಕರಗಿಸಿದರೆ, ಕರಗದಿರುವ ನಾರು ಮಲಬದ್ಧತೆಯನ್ನು ನಿವಾರಿಸುತ್ತದೆ. ಗ್ಯಾಸ್ನಂತಹ ಯಾವುದೇ ಸಮಸ್ಯೆಗಳಿದ್ದರೆ ಇದರಿಂದ ಮುಕ್ತಿ ಸಿಗಲಿದೆ.
ಇದರಲ್ಲಿರುವ ಪೊಟಾಶಿಯಂ ಅಂಶವು ಡೈಯುರೇಟಿಕ್‌ನಂತೆ ಕೆಲಸ ಮಾಡುತ್ತದೆ. ಅಂದರೆ ಹೆಚ್ಚುವರಿ ನೀರಿನಂಶ ದೇಹದಲ್ಲಿ ಉಳಿಯದಂತೆ, ಹೊಟ್ಟೆ ಉಬ್ಬರಿಸದಂತೆಯೂ ಪರಿಣಾಮ ಬೀರುತ್ತದೆ. ತೂಕ ಇಳಿಸುವವರಿಗೂ ಇದು ಉಪಯುಕ್ತ ಎನಿಸಬಹುದು. ಅಂದರೆ, ನಾರಿನಂಶ ಹೆಚ್ಚಿರುವುದರಿಂದ ಬೇಗ ಹಸಿವಾಗುವುದಿಲ್ಲ. ಆಗಾಗ ತಿನ್ನುವ ಬೇಡಿಕೆಯನ್ನು ಮಟ್ಟ ಹಾಕಬಹುದು. ಜೊತೆಗೆ ದೇಹದಲ್ಲಿನ ಹೆಚ್ಚುವರಿ ನೀರನ್ನು ತೆಗೆದು ಹೊಟ್ಟೆಯೆಲ್ಲ ಹಗುರವಾಗಿರುವಂತೆ ಮಾಡುತ್ತದೆ.
ಸಿಹಿಗೆಣಸಿನಲ್ಲಿ ಕ್ಯಾರೊಟಿನಾಯ್ಡ್‌ಗಳು ಅಧಿಕವಾಗಿದೆ. ಅದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸಿಹಿಗೆಣಸಿನಲ್ಲಿರುವ ಆಂಥೋಸಯಾನಿನ್, ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ. ಕ್ಯಾನ್ಸರ್‌ನಿಂದ ದೂರವಿರಲು ನಿಮ್ಮ ಆಹಾರದಲ್ಲಿ ಸಿಹಿಗೆಣಸನ್ನು ನಿಯಮಿತವಾಗಿ ಬಳಸಬೇಕು ಎಂದು ತಜ್ಞರು ಹೇಳುತ್ತಾರೆ.
ಚಳಿಗಾಲದಲ್ಲಿ ಚರ್ಮ ಒಣಗುತ್ತದೆ. ಈ ಅವಧಿಯಲ್ಲಿ ಸಿಹಿಗೆಣಸು ತಿಂದರೆ, ತ್ವಚೆ ತೇವಾಂಶದಿಂದ ಕೂಡಿರುತ್ತದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಚರ್ಮದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ. ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮಕ್ಕೆ ವಯಸ್ಸಾಗುವುದನ್ನು ತಡೆಯುತ್ತದೆ.
ಸಿಹಿ ಗೆಣಸಿನಲ್ಲಿ ರಕ್ತದೊತ್ತಡದ ಮಟ್ಟವನ್ನು ಸುಧಾರಿಸುತ್ತದೆ. ಪೊಟ್ಯಾಸಿಯಮ್ ಕೂಡ ಹೆಚ್ಚಾಗಿ ಇರುವುದರಿಂದ ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯವಾಗಿದೆ. ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಮತ್ತು ಶಾಂತತೆಯ ಭಾವನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಇದು ಒತ್ತಡದ ಸಮಯದಲ್ಲಿ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನ್‌ಗಳ ಮೇಲೆ ಪ್ರಭಾವ ಬೀರುವ ಅಂಶ ಇಟ್ಟುಕೊಂಡಿದೆ.
ಸಿಹಿ ಗೆಣಸಿನಲ್ಲಿರುವ ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಎ ದೃಷ್ಟಿಯ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಇದು ಕಣ್ಣಿನ ಪೊರೆ, ದೃಷ್ಟಿ ದೋಷ, ಕಣ್ಣುಗಳಲ್ಲಿ ಉರಿ ಇನ್ನು ಅನೇಕ ಸಮಸ್ಯೆಗಳಿಂದ ಪಾರು ಮಾಡುತ್ತದೆ. ಅಲ್ಲದೇ, ಇದರಲ್ಲಿನ ವಿಟಮಿನ್ ಸಿ ಮತ್ತು ಐರನ್ ಬಿಳಿ ಹಾಗು ಕೆಂಪು ರಕ್ತ ಕಣವನ್ನು ವೃದ್ಧಿಸುತ್ತದೆ. ಯಾವುದೇ ರೋಗವು ಹತ್ತಿರ ಸುಳಿಯದಂತೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
Leave a Comment