ಗೌರಿ ಲಂಕೇಶ್ ಹತ್ಯೆ ಪ್ರಕರಣ: ಜಾಮೀನು ಮೇಲೆ ಹೊರಬಂದ ಆರೋಪಿಗಳಿಗೆ ಅದ್ದೂರಿ ಸ್ವಾಗತ
ನ್ಯೂಸ್ ಆ್ಯರೋ: ಪತ್ರಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿಯಾಗಿದ್ದ ಗೌರಿ ಲಂಕೇಶ್ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿ ಸೆಪ್ಟಂಬರ್ 5 ಕ್ಕೆ ಒಂದು ವರ್ಷ ಪೂರ್ಣಗೊಂಡಿದೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಈ ಹತ್ಯೆ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು.
2017ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಸಾಹಿತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಪ್ರಕರಣದಲ್ಲಿ ವಿಜಯಪುರದ ಇಬ್ಬರು ಆರೋಪಿತರನ್ನೂ ಖಾಕಿ ಪಡೆ ಅರೆಸ್ಟ್ ಮಾಡಿತ್ತು. ಸುಮಾರು ಆರುವರೆ ವರ್ಷಗಳ ಬಳಿಕ ಆ ಇಬ್ಬರು ಆರೋಪಿತರಿಗೆ ಜಾಮೀನು ಸಿಕ್ಕಿದ್ದು, ತವರಿಗೆ ಆಗಮಿಸಿದ್ಧಾರೆ. ಹಿಂದೂಪರ ಸಂಘಟನೆಗಳು ಅವರಿಬ್ಬರಿಗೂ ಅದ್ದೂರಿ ಸ್ವಾಗತ ಮಾಡಿದ್ದಾರೆ.
ಕಳೆದ 2018 ಜೂನ್ 13 ರಂದು ಜಿಲ್ಲೆಯ ಸಿಂದಗಿ ಪಟ್ಟಣದ ಬಸವನಗರ ವಾಸಿ ಪರಶುರಾಮ್ ವಾಗ್ಮೋರೆಯನ್ನು ಗೌರಿ ಲಂಕೇಶ ಹತ್ಯೆ ಆರೋಪದ ಮೇಲೆ ಹತ್ಯೆಯ ತನಿಖೆ ನಡೆಸುತ್ತಿದ್ದ ಎಸ್ಐಟಿ ತಂಡ ಬಂಧಿಸಿತ್ತು. ಬಳಿಕ ಇದೇ ಆರೋಪದ ಮೇಲೆ ವಿಜಯಪುರ ತಾಲೂಕಿನ ರತ್ನಾಪೂರ ಗ್ರಾಮದ ಮನೋಹರ ಯಡವೆಯನ್ನೂ ಬಂಧಿಸಲಾಗಿತ್ತು. ಗೌರಿ ಹತ್ಯೆಯಲ್ಲಿ ಒಟ್ಟು 25 ಜನ ಆರೋಪಿತರನ್ನು ಎಸ್ಐಟಿ ತಂಡ ಬಂಧಿಸಿತ್ತು. ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಸಹ ಆರೋಪಿತರಿಗೆ ಜಾಮೀನು ಸಿಕ್ಕಿರಲಿಲ್ಲ.
ಗೌರಿ ಹತ್ಯೆ ಬಳಿಕ ಸುಮಾರು ಆರುವರೆ ವರ್ಷಗಳ ಬಳಿಕ 25 ಜನ ಆರೋಪಿತರಲ್ಲಿ 18 ಜನರಿಗೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಜಾಮೀನು ನೀಡಿದ್ದು ಇನ್ನೂ 7 ಜನ ಆರೋಪಿತರಿಗೂ ಜಾಮೀನು ಸಿಗಲಿದೆ ಎನ್ನಲಾಗಿದೆ. ಇತ್ತ ವಿಜಯಪುರದ ಇಬ್ಬರು ಆರೋಪಿತರಾದ ಪರಶುರಾಮ ವಾಗ್ಮೋರೆ ಹಾಗೂ ಮನೋಹರ್ ಯಡವೆ ಎಂಬ ಇಬ್ಬರಿಗೆ ನಿನ್ನೆ ಬೆಂಗಳೂರಿನ ಸೆಷನ್ಸ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ನಿನ್ನೆಯೇ ಸಾಯಂಕಾಲ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಹೊರ ಬಂದವರು ನೇರವಾಗಿ ವಿಜಯಪುರಕ್ಕೆ ಆಗಮಿಸಿದ್ದಾರೆ.
ಗೌರಿ ಹತ್ಯೆಯ ಇಬ್ಬರು ಆರೋಪಿತರನ್ನು ಜಿಲ್ಲೆಯ ಹಿಂದೂ ಪರ ಸಂಘಟನೆಗಳ ಹಾಗೂ ಶ್ರೀರಾಮ ಸೇನೆಯ ಮುಖಂಡರು ಪದಾಧಿಕಾರಿಗಳು ಸ್ವಾಗತ ಮಾಡಿದ್ದಾರೆ. ನಗರದ ಕಾಳಿಕಾ ಮಂದಿರದಲ್ಲಿ ಇಬ್ಬರೂ ಆರೋಪಿತರು ಪೂಜೆ ಮಾಡಿ ಪ್ರಾರ್ಥಣೆ ಸಲ್ಲಿಸಿದ್ದಾರೆ. ಬಳಿಕ ಪರಶುರಾಮ ವಾಗ್ಮೋರೆ ಹಾಗೂ ಮನೋಹರ ಯಡವೆಗೆ ಶಾಲು ಹೊದಿಸಿ ಹಾರ ಹಾಕಿ ಸನ್ಮಾನಿಸಲಾಯಿತು. ಬಳಿಕ ಶಿವಾಜಿ ವೃತ್ತಕ್ಕೆ ತೆರಳಿ ಶಿವಾಜಿ ಮೂರ್ತಿಗೆ ಹಾರ ಹಾಕಿದರು.
ಇದೇ ವೇಳೆ ಮಾತನಾಡಿದ ಶ್ರೀರಾಮ ಸೇನೆಯ ಮುಖಂಡ ನೀಲಕಂಠ ಕಂದಗಲ್ ಗೌರಿ ಲಂಕೇಶ ಹತ್ಯೆಯಲ್ಲಿ ಪರಶುರಾಮ ಹಾಗೂ ಮನೋಹರ್ ಭಾಗಿಯಾಗಿಲ್ಲ. ಹಿಂದೂ ಪರ ಹೋರಾಟಗಾರರನ್ನು ಕಾಂಗ್ರೆಸ್ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಸಾದ್ವಿ ಪ್ರಜ್ಞಾಸಿಂಗ್ಗೆ ವಿನಾ ಕಾರಣ ಬಂಧಿಸಲ್ಪಟ್ಟಿದ್ದರು. ಅವರಿಗೆ ಹಿಂಸೆ ನೀಡಲಾಗಿತ್ತು. ಅವರು ನಿರಪರಾಧಿಗಳಾಗಿ ಹೊರಗೆ ಬಂದಂತೆ ನಮ್ಮ ಜಿಲ್ಲೆಯ ಪರಶುರಾಮ ಹಾಗೂ ಮನೋಹರ್ ನಿರಪರಾಧಿಗಳಾಗಿ ಬಿಡುಗಡೆಯಾಗಿ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Leave a Comment