ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ – ಟ್ರಂಪ್ ಪ್ರಾಣಾಪಾಯದಿಂದ ಪಾರು, ಇಬ್ಬರು ಸಾವು
ನ್ಯೂಸ್ ಆ್ಯರೋ : ಅಮೆರಿಕದ ಪೆನ್ಸಿಲ್ವೇನಿಯಾದ ಬಟ್ಲರ್ನಲ್ಲಿ ಶನಿವಾರ ಸಂಜೆ ನಡೆದ ರ್ಯಾಲಿಯಲ್ಲಿ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಿವಿ ಮತ್ತು ಮುಖದ ಮೇಲೆ ರಕ್ತ ಬಂದಿದ್ದು, ಕೂಡಲೇ ಅವರನ್ನು ವೇದಿಕೆಯಿಂದ ಸ್ಥಳಾಂತರಿಸಲಾಗಿದೆ.
ಸ್ಥಳೀಯ ಸಮಯದ ಪ್ರಕಾರ, ಅವರು ಶನಿವಾರ (ಜುಲೈ 13) ಪೆನ್ಸಿಲ್ವೇನಿಯಾದ ಬಟ್ಲರ್ ನಗರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಆಗಮಿಸಿದಾಗ ಅಲ್ಲಿ ಗುಂಡಿನ ದಾಳಿ ಪ್ರಾರಂಭವಾಗಿದೆ. ಈ ದಾಳಿಯಲ್ಲಿ ಮಾಜಿ ಅಧ್ಯಕ್ಷ ಟ್ರಂಪ್ ಗಾಯಗೊಂಡಿದ್ದು, ಅವರ ಮುಖದಲ್ಲೆಲ್ಲ ರಕ್ತದ ಕಲೆ ಕಂಡು ಬಂದಿದೆ. ಸುದ್ದಿ ಸಂಸ್ಥೆ AFP ಪ್ರಕಾರ, ಕೂಡಲೇ ಅವರನ್ನು ಸುರಕ್ಷಿತವಾಗಿ ವೇದಿಕೆಯಿಂದ ಕೆಳಗಿಳಿಸಿ ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ರ್ಯಾಲಿಯಲ್ಲಿ ಗುಂಡಿನ ದಾಳಿಯ ನಂತರ ವೀಡಿಯೊ ಕೂಡ ವೈರಲ್ ಆಗಿದ್ದು, ಇದರಲ್ಲಿ ಟ್ರಂಪ್ ಅವರ ಕಿವಿಯ ಬಳಿ ರಕ್ತ ಹೊರಬರುವುದನ್ನು ಕಾಣಬಹುದು. ಘಟನೆ ನಡೆದ ತಕ್ಷಣ, ರಹಸ್ಯ ಸೇವಾ ಸಿಬ್ಬಂದಿ ಟ್ರಂಪ್ ಅವರನ್ನು ವೇದಿಕೆಯಿಂದ ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್ ವಕ್ತಾರರು, ‘ಈ ಘೋರ ದಾಳಿಯ ಸಂದರ್ಭದಲ್ಲಿ ತಕ್ಷಣದ ಕ್ರಮ ಕೈಗೊಂಡಿದ್ದಕ್ಕಾಗಿ ಕಾನೂನು ಜಾರಿ ಮತ್ತು ಪ್ರತಿಸ್ಪಂದನೆ ಮಾಡಿದ್ದಕ್ಕೆ ಡೊನಾಲ್ಡ್ ಟ್ರಂಪ್ ಧನ್ಯವಾದ ಹೇಳಿದರು. ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಸ್ಥಳೀಯ ವೈದ್ಯರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡುವ ವಿಫಲ ಪ್ರಯತ್ನದ ಭಾಗವಾಗಿ ಈ ಘಟನೆಯನ್ನು ತನಿಖೆ ನಡೆಸಲಾಗುತ್ತಿದೆ ಎಂದು ಬಟ್ಲರ್ ಕೌಂಟಿ ಜಿಲ್ಲಾ ಅಟಾರ್ನಿ ರಿಚರ್ಡ್ ಎ. ಗೋಲ್ಡಿಂಗರ್ ಹೇಳಿದ್ದು, ದಾಳಿ ಮಾಡಿದ ವ್ಯಕ್ತಿಯನ್ನು ಕೊಲ್ಲಲಾಗಿದೆ. ರ್ಯಾಲಿಯಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿಯೂ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಪೋಡಿಯಂನಿಂದ ಟ್ರಂಪ್ ತೆರಳಿದ ತಕ್ಷಣವೇ ಕಾನೂನು ಜಾರಿ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿದ್ದಾರೆ. ಭದ್ರತಾ ಸಿಬ್ಬಂದಿ ಟ್ರಂಪ್ ಅವರನ್ನು ವೇದಿಕೆಯಿಂದಾಚೆ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. “ಪೆನ್ಸೆಲ್ವೇನಿಯಾದಲ್ಲಿ ಟ್ರಂಪ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ರಹಸ್ಯ ಸೇವೆಗಳ ವಿಭಾಗ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ. ಟ್ರಂಪ್ ಸುರಕ್ಷಿತವಾಗಿದ್ದಾರೆ. ತನಿಖೆ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿಯನ್ನು ಶೀಘ್ರದಲ್ಲಿ ನೀಡಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ.
Leave a Comment