ಫೋನ್ ತೆಗೆದುಕೊಡಲು ನಿರಾಕರಿಸಿದ್ದಕ್ಕೆ ಮಗ ಸಾವು; ನೊಂದು ಅದೇ ಹಗ್ಗದಲ್ಲಿ ನೇಣಿಗೆ ಶರಣಾದ ತಂದೆ

ನ್ಯೂಸ್ ಆ್ಯರೋ: ಮಗನ ಸ್ಮಾರ್ಟ್‌ಫೋನ್ ಕೊಳ್ಳುವ ಆಸೆ ಈಡೇರಿಸಲಾಗದೇ ತಂದೆ ಮಗ ಇಬ್ಬರು ಸಾವಿನ ಹಾದಿ ಹಿಡಿದ ದುರಂತಮಯ ಘಟನೆ ಮಹಾರಾಷ್ಟ್ರದ ನಾಂದೇಡ್ ಗ್ರಾಮದಲ್ಲಿ ನಡೆದಿದೆ. 16 ವರ್ಷ ಮಗ ಹಾಗೂ ಆತನ ತಂದೆಯ ಶವ ಕುಟುಂಬಕ್ಕೆ ಸೇರಿದ ಬಿಲೋಲಿ ತಹಶೀಲ್‌ನ ಮಿನಕಿಯಲ್ಲಿರುವ ಜಮೀನಿನಲ್ಲಿ ಪತ್ತೆಯಾಗಿದೆ. ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಅಪ್ಪ ಮಗ ಸಾವಿನ ಮನೆ ಸೇರಿದ್ದಾರೆ.
ಮೂವರು ಗಂಡು ಮಕ್ಕಳಲ್ಲಿ ಕೊನೆಯವನಾಗಿದ್ದ 16 ವರ್ಷದ ಮಗ ತನಗೆ ಸ್ಮಾರ್ಟ್‌ಫೋನ್ ಬೇಕೆಂದು ತಂದೆಯ ಬಳಿ ಆಗ್ರಹಿಸಿದ್ದಾನೆ. ಈ ಮೂವರು ಸಹೋದರರು ಲಾತೂರ್ ಜಿಲ್ಲೆಯ ಉದಯ್‌ಗಿರ್‌ನಲ್ಲಿರುವ ಹಾಸ್ಟೆಲ್‌ನಲ್ಲಿ ವಾಸ ಮಾಡುತ್ತಾ ವಿದ್ಯಾಭ್ಯಾಸ್ ಮಾಡುತ್ತಿದ್ದರು, ಮಕರ ಸಂಕ್ರಾಂತಿ ಆಚರಿಸುವುದಕ್ಕಾಗಿ ಪುತ್ರ ಓಂಕಾರ್ ಮನೆಗೆ ಬಂದಿದ್ದ. ಆದರೆ ಈ ವೇಳೆ ಮಗ ಅಪ್ಪನ ಬಳಿ ಸ್ಮಾರ್ಟ್‌ಫೋನ್‌ಗೆ ಬೇಡಿಕೆ ಇಟ್ಟಿದ್ದು, ಇದು ದುರಂತದಲ್ಲಿ ಅಂತ್ಯ ಕಂಡಿದೆ.
ಘಟನೆ ಬಗ್ಗೆ ಪೊಲೀಸ್ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ಪುತ್ರ ಓಂಕಾರ್ ಅಪ್ಪನ ಬಳಿ ಶೈಕ್ಷಣಿಕ ಕಾರಣಕ್ಕೆ ತನಗೆ ಸ್ಮಾರ್ಟ್‌ಫೋನ್ ಖರೀದಿಸಿ ನೀಡುವಂತೆ ಕೇಳಿದ್ದಾನೆ. ಆದರೆ ರೈತನಾದ ತಂದೆಗೆ ಇಷ್ಟೊಂದು ಹಣವನ್ನು ಒಮ್ಮೆಲೇ ಹೊಂದಿಸುವುದು ಕಷ್ಟವಾದ ಕಾರಣ ಮಗನಿಗೆ ಫೋನ್ ಖರೀದಿಸಿ ನೀಡಲು ತಂದೆಗೆ ಸಾಧ್ಯವಾಗಲಿಲ್ಲ ಎಂದಿದ್ದಾರೆ. ನಾವು ಈ ಅಪ್ಪ ಮಗನ ಸಾವಿಗೆ ಸಂಬಂಧಿಸಿದಂತೆ ಹುಡುಗನ ತಾಯಿ ನೀಡಿದ ಹೇಳಿಕೆ ಆಧರಿಸಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದೇವೆ. ಘಟನೆಗೆ ಕಾರಣವಾದ ಸಂದರ್ಭದ ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ನಾಂದೇಡ್ ಎಸ್‌ಪಿ ಅಭಿನಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈಗಾಗಲೇ ಸಾಲದ ಕಂತು ಕಟ್ಟಲು ಬಾಕಿ ಇರುವುದರಿಂದ ಮಗನಿಗೆ ಫೋನ್ ಖರೀದಿಸಿ ನೀಡಲು ರೈತ ತಂದೆ ನಿರಾಕರಿಸಿದ್ದಾನೆ. ತನ್ನ ಮಗ ಸ್ವಲ್ಪ ಸಮಯದಿಂದ ತನ್ನ ಗಂಡನ ಬಳಿ ಸ್ಮಾರ್ಟ್‌ಫೋನ್ ಖರೀದಿಸಿ ನೀಡುವಂತೆ ಕೇಳುತ್ತಿದ್ದ. ಸಂಕ್ರಾಂತಿಗೆಂದು ಮನೆಗೆ ಬಂದಿದ್ದ ಮಗ ಮತ್ತೆ ಸ್ಮಾರ್ಟ್‌ಫೋನ್ ವಿಚಾರ ಪ್ರಸ್ತಾಪಿಸಿದ್ದಾನೆ.
ಆದರೆ ಅವನ ತಂದೆ ಜಮೀನು ಮತ್ತು ವಾಹನಕ್ಕಾಗಿ ತೆಗೆದುಕೊಂಡ ಸಾಲವನ್ನು ಮರುಪಾವತಿಸುತ್ತಿದ್ದರಿಂದ ಸ್ಮಾರ್ಟ್‌ಫೋನ್ ಖರೀದಿಸಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ತಂದೆಯ ಮಾತಿನಿಂದ ಬೇಸರಗೊಂಡು ಹುಡುಗ ಮನೆ ಬಿಟ್ಟು ಹೋಗಿದ್ದ ಎಂದು ಹುಡುಗನ ತಾಯಿ ಹೇಳಿದ್ದಾಳೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಸಬ್ ಇನ್ಸ್‌ಪೆಕ್ಟರ್ ದಿಲೀಪ್ ಮುಂಡೆ ಹೇಳಿದ್ದಾರೆ.
Leave a Comment