
ಕೊಪ್ಪದ ಕಾಡಿನಲ್ಲಿ ಮೂವರು ಮುಸ್ಲಿಂ ಯುವಕರ ಜೊತೆ ಹಿಂದೂ ವಿದ್ಯಾರ್ಥಿನಿ – ವೈರಲ್ ಆದ ಸುದ್ದಿಯ ಬಗ್ಗೆ ಎಸ್ಪಿ ಏನಂದ್ರು? ಘಟನೆ ನಡೆದದ್ದೆಲ್ಲಿ? ಸುದ್ದಿಯ ಅಸಲಿಯತ್ತೇನು?
- ಸತ್ಯಾನ್ವೇಷಣೆ
- September 7, 2023
- No Comment
- 208
ನ್ಯೂಸ್ ಆ್ಯರೋ : ಕಳೆದೆರಡು ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಕಳಸದ ಹಾಸ್ಟೆಲ್ ನಲ್ಲಿ ಇದ್ದು ಕಾಲೇಜು ಓದುತ್ತಿದ್ದ ಹಿಂದೂ ಹುಡುಗಿ ಮೂವರು ಮುಸ್ಲಿಂ ಹುಡುಗರೊಂದಿಗೆ ಕೊಪ್ಪದ ಕಾಡಿನಲ್ಲಿ ಪತ್ತೆಯಾಗಿ ಹಿಗ್ಗಾಮುಗ್ಗ ಥಳಿತವಾಗಿದೆ ಎಂಬ ಒಕ್ಕಣೆಯೊಂದಿಗೆ ಸಂದೇಶವೊಂದು ಫೋಟೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮಾಟೆ ವಿಕ್ರಮ್ ಸ್ಪಷ್ಟನೆ ನೀಡಿದ್ದಾರೆ.
ವೈರಲ್ ಆದ ಫೋಟೋ ಕೆಲದಿನಗಳ ಹಿಂದಿನ ಘಟನೆಯದ್ದಾಗಿದ್ದು, ಯಾವುದೇ ರೀತಿಯ ಅಸಂಬದ್ಧ ಚಟುವಟಿಕೆಗಳು ಕಂಡುಬಂದಿಲ್ಲ. ನಮ್ಮ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಘಟನೆಯ ಹಿನ್ನೆಲೆ :
ಚಿಕ್ಕಮಗಳೂರು ಜಿಲ್ಲೆಯ, ಕೊಪ್ಪ ತಾಲ್ಲೂಕಿನ ಮಲೆನಾಡು ವ್ಯಾಪ್ತಿಯ ಕಪಿಲಕಟ್ಟೆ ಕುದುರೆಗುಂಡಿ ಗ್ರಾಮದ ಜಲಪಾತದ ಕಡೆ ಕೆಲವು ಹುಡುಗರು ಹಾಗೂ ಹುಡುಗಿಯರು ಪ್ರವಾಸಕ್ಕೆಂದು ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಊರಿನ ಗ್ರಾಮಸ್ಥರು ಎಲ್ಲರಿಗೂ ಎಚ್ಚರಿಕೆ ನೀಡಿ, ತಿಳಿಗೊಳಿಸಿ ವಾಪಸ್ ಕಳುಹಿಸಿದ್ದರು.
ಸುದ್ದಿ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಅಲ್ಲಿ ಸೇರಿದ್ದ ಎಲ್ಲರಿಗೂ ಎಚ್ಚರಿಕೆ, ಸೂಕ್ತ ತಿಳುವಳಿಕೆ ಹಾಗೂ ಬುದ್ಧಿವಾದ ಹೇಳಿ ಯಾರೂ ಕೂಡ ಕಾನೂನಿಗೆ ವಿರುದ್ದವಾಗಿ ನಡೆದುಕೊಳ್ಳದಂತೆ ತಿಳಿಸಿ ಸೂಕ್ತ ಕ್ರಮ ಕೈಗೊಂಡಿರುತ್ತಾರೆ.
ಇದು ಹಳೆಯ ವಿಚಾರವಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಕೆಲ ಕಿಡಿಗೇಡಿಗಳು ಹಬ್ಬಿಸಿರುವಂತೆ ಯಾವುದೇ ರೀತಿಯ ಗಲಾಟೆ ಅಹಿತಕರ ಘಟನೆಗಳು ಸಂಭವಿಸಿರುವುದಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ಕೂಡ ಸಂಬಂಧ ಪಟ್ಟ ಠಾಣೆಯಲ್ಲಿ ದಾಖಲಾಗಿರುವುದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಈ ರೀತಿಯ ಸುಳ್ಳು ಸುದ್ದಿಗಳಿಗೆ ಕಿವಿ ಕೊಡದಂತೆ ಸಾರ್ವಜನಿಕರಲ್ಲಿ ಪೋಲಿಸರು ಮನವಿ ಮಾಡಿದ್ದಾರೆ.