
‘ದಿ ಎಲಿಫೆಂಟ್ ವಿಸ್ಪರರ್ಸ್’ಡಾಕ್ಯುಮೆಂಟರಿಗೆ ‘ಆಸ್ಕರ್’ಗರಿ – ಮಾವುತರಿಗೆ ಬಂಪರ್ ಬಹುಮಾನ ಘೋಷಿಸಿದ ಸಿಎಂ ಸ್ಟಾಲಿನ್
- ಮನರಂಜನೆ
- March 19, 2023
- No Comment
- 89
ನ್ಯೂಸ್ ಆ್ಯರೋ : ಅಮೆರಿಕದ ಲಾಸ್ ಏಂಜಲೀಸ್ನ ಡಾಲ್ಫಿ ಥಿಯೇಟರ್ನಲ್ಲಿ ನಡೆದ 2023 ನೇ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ಎರಡು ಚಿತ್ರತಂಡ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
‘ಆರ್ಆರ್ಆರ್’ ತೆಲುಗು ಚಿತ್ರದ ‘ನಾಟು ನಾಟು’ ಅತ್ಯುತ್ತಮ ಮೂಲ ಗೀತೆ ಮತ್ತು ಕಾರ್ತಿಕಿ ಗೊನ್ಸಾಲ್ವೆಸ್ ಅವರ ‘ದಿ ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿದೆ. ಎರಡೂ ಚಿತ್ರತಂಡಕ್ಕೂ ಶುಭಾಶಯಗಳ ಮಹಾಪೂರವೇ ಹರಿದುಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ರಾಜಕೀಯ ಗಣ್ಯರು, ಕ್ರೀಡಾಪಟುಗಳು, ಸಿನಿಮಾ ರಂಗದವರು, ಜನ ಸಾಮಾನ್ಯರು ಈಗಾಗಲೇ ಶುಭಕೋರಿದ್ದಾರೆ.
ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು ಪ್ರಶಸ್ತಿ ವಿಜೇತ ಡಾಕ್ಯುಮೆಂಟರಿಯ ಕಥಾ ನಾಯಕ ಮತ್ತು ನಾಯಕಿಗೆ ಭರ್ಜರಿ ಬಹುಮಾನ ಘೋಷಣೆ ಮಾಡಿದ್ದಾರೆ. ದಿ ಎಲಿಫೆಂಟ್ ವಿಸ್ಪರರ್ಸ್ ಡಾಕ್ಯುಮೆಂಟರಿಯ ನಿಜವಾದ ಹೀರೋ ಬೊಮ್ಮನ್ ಮತ್ತು ಹಿರೋಯಿನ್ ಬೆಳ್ಳಿ ಎಂಬ ಮಾವುತ ದಂಪತಿಗಳು. ಈ ಡಾಕ್ಯುಮೆಂಟರಿಯಲ್ಲಿ ಇವರ ಬದುಕನ್ನು ತೋರಿಸಲಾಗಿದೆ. ಆಸ್ಕರ್ ಲಭಿಸಿದ ಖುಷಿಯಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಇವರಿಬ್ಬರನ್ನೂ ಸಿಎಂ ಕಚೇರಿಗೆ ಕರೆಸಿಕೊಂಡು ನೆನಪಿನ ಫಲಕ ಮತ್ತು ₹2 ಲಕ್ಷ ಬಹುಮಾನ ನೀಡಿದ್ದಾರೆ.
ಕೇವಲ ಈ ಇಬ್ಬರಿಗೆ ಮಾತ್ರ ಬಹುಮಾನ ನೀಡಿಲ್ಲ. ಆನೆ ಶಿಬಿರದಲ್ಲಿ ಕೆಲಸ ಮಾಡುತ್ತಿರುವ 91 ಮಾವುತರಿಗೂ ತಲಾ ಒಂದೊಂದು ಲಕ್ಷ ರೂಪಾಯಿಯನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಾವುತರಿಗೆ ಮನೆ ಕಟ್ಟಿಕೊಡಲು 9.1 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಎಂ ಸ್ಟಾಲಿನ್ ಅವರು ದಂಪತಿಯನ್ನು ಸನ್ಮಾನಿಸಿ, ಚೆಕ್ ವಿತರಣೆ ಮಾಡಿರುವ ಫೋಟೋವನ್ನು ಶೇರ್ ಮಾಡಿ, ಶುಭಕೋರಿದ್ದಾರೆ.