
ಗ್ಯಾಂಗ್‌ಸ್ಟಾರ್ ಲಾರೆನ್ಸ್ ಬಿಷ್ಣೋಯಿಯಿಂದ ನಟ ಸಲ್ಮಾನ್‌ಗೆ ಜೀವಬೆದರಿಕೆ – ನಟನ ಮನೆ ಸುತ್ತ ಭದ್ರತೆ ಹೆಚ್ಚಿಸಿದ ಮುಂಬೈ ಪೊಲೀಸರು
- ಮನರಂಜನೆ
- March 20, 2023
- No Comment
- 95
ನ್ಯೂಸ್ ಆ್ಯರೋ : ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಇದೀಗ ಜೀವ ಬೆದರಿಕೆಯೊಡ್ಡಿ ಇ ಮೇಲ್ ಬಂದ ಹಿನ್ನೆಲೆಯಲ್ಲಿ ಮನೆಯ ಸುತ್ತಲೂ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಕಳೆದ ವರ್ಷ ಸಲ್ಮಾನ್ ಖಾನ್ ಹಾಗೂ ತಂದೆ ಸಲೀಂ ಖಾನ್ ಅವರಿಗೆ ಜೀವ ಬೆದರಿಕೆ ಪತ್ರ ದೊರೆತ ಪ್ರಕರಣದ ಸಂಬಂಧ ಕಳೆದ ವರ್ಷ ಮುಂಬೈ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದೀಗ ಮತ್ತೆ ಸಲ್ಮಾನ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‍ನಿಂದ ಜೀವ ಬೆದರಿಕೆ ಇ-ಮೇಲ್ ಬಂದಿದೆ.
ಸಲ್ಮಾನ್ ಖಾನ್ ಮ್ಯಾನೇಜರ್ ಪ್ರಶಾಂತ್ ಗುಂಜಾಲ್ಕರ್ ಅವರಿಗೆ ರೋಹಿತ್ ಗಾರ್ಗ್ ಎಂಬ ಹೆಸರಿನಿಂದ ಇ ಮೇಲ್ ಬಂದಿದೆ. ಇದರಲ್ಲಿ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಒಡ್ಡಿದ್ದು ಬಾಂದ್ರಾ ಪೊಲೀಸರು ಮತ್ತೊಮ್ಮೆ ರೋಹಿತ್ ಗಾರ್ಗ್, ಗೋಲ್ಡಿ ಬ್ರಾರ್ ಹಾಗೂ ಲಾರೆನ್ಸ್ ಬಿಷ್ಣೋಯಿ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಚಾರಣೆಯಲ್ಲಿ ಬೆಚ್ಚಿ ಬೀಳಿಸಿದ ಲಾರೆನ್ಸ್ ಹೇಳಿಕೆ:
ಸಿಧು ಮೂಸೆವಾಲಾ ಹತ್ಯೆಗೂ ಮುನ್ನ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯಿ ಹಂತಕರು ಸಂಚು ರೂಪಿಸಿದ್ದರಂತೆ. ಲಾರೆನ್ಸ್ ಬಿಷ್ಣೋಯಿ ಸದ್ಯಕ್ಕೆ ತಿಹಾರ್ ಜೈಲಿನಲ್ಲಿದ್ದು ಸಲ್ಮಾನ್ ಖಾನ್ ಕೊಲ್ಲುವುದೇ ನನ್ನ ಜೀವನದ ಅಂತಿಮ ಗುರಿ ಎಂದು ವಿಚಾರಣೆ ವೇಳೆ ಹೇಳಿರುವುದು ತಿಳಿದುಬಂದಿದೆ.
ಕೃಷ್ಣಮೃಗ ಭೇಟೆಯಾಡಿದ್ದಕ್ಕೆ ಸಲ್ಮಾನ್ ಮೇಲೆ ಸೇಡು: ಬಿಷ್ಣೋಯಿ ಸಮುದಾಯ ದೇವರಂತೆ ಆರಾಧಿಸುವ ಕೃಷ್ಣಮೃಗವನ್ನು ಕೊಂದು ಸಲ್ಮಾನ್ ಖಾನ್ ತಪ್ಪು ಮಾಡಿದ್ದಾರೆ. ಬಿಕಾನೇರ್ ದೇವಸ್ಥಾನಕ್ಕೆ ಹೋಗಿ ಆತ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕೂಡಾ ಲಾರೆನ್ಸ್ ಬಿಷ್ಣೋಯಿ ಬೇಡಿಕೆ ಇಟ್ಟಿದ್ದ. ಇದರ ಬೆನ್ನಲ್ಲೇ ಮತ್ತೆ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಬಂದ ಹಿನ್ನೆಲೆ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ.
2018ರ ವರೆಗೂ ಸಲ್ಮಾನ್ ಅವರನ್ನು ಹತ್ಯೆ ಮಾಡಲು ಪ್ಲಾನ್ ನಡೆದಿತ್ತಂತೆ. ಆದರೆ ಹೆಚ್ಚಿನ ಭದ್ರತೆಯಿಂದ ಅದು ಸಾಧ್ಯವಾಗಲಿಲ್ಲ ಎಂದು ಲಾರೆನ್ಸ್ ಬಿಷ್ಣೋಯಿ ವಿಚಾರಣೆ ವೇಳೆ ಬಾಯಿ ಬಿಟ್ಟಿರುವುದು ಆತಂಕಕಾರಿಯಾಗಿದೆ.