
ಬಾಲ್ಕನಿಯಲ್ಲಿದ್ದ ಪತ್ನಿ ಆಲಿಯಾ ಫೋಟೋ ವೈರಲ್ – ಕಾನೂನು ಕ್ರಮಕ್ಕೆ ಮುಂದಾದ ನಟ ರಣಬೀರ್ ಕಪೂರ್
- ಮನರಂಜನೆ
- March 11, 2023
- No Comment
- 55
ನ್ಯೂಸ್ ಆ್ಯರೋ : ಮಗುವಿನ ಆರೈಕೆಯಲ್ಲಿ ಕಾಲ ಕಳೆಯುತ್ತಿರುವ ನಟಿ ಆಲಿಯಾ ಭಟ್ ಅವರ ಖಾಸಗಿ ಫೋಟೋವನ್ನು ಹಂಚಿಕೊಂಡವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳುವುದಾಗಿ ನಟ ರಣಬೀರ್ ಕಪೂರ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಆಲಿಯಾ ಭಟ್ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ಕುಳಿತಿದ್ದ ಚಿತ್ರಗಳನ್ನು ಪಾಪರಾಜಿಗಳು ಲೀಕ್ ಮಾಡಿದ್ದರು. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಆಲಿಯಾ ಬೆಂಬಲಕ್ಕೆ ಬಂದಿದ್ದರು.
ಇದೀಗ ರಣಬೀರ್ ಕೂಡ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇದು ಗೌಪ್ಯತೆಯ ಉಲ್ಲಂಘನೆಯಾಗಿದೆ. ನೀವು ನನ್ನ ಮನೆಯೊಳಗೆ ಈ ರೀತಿ ಚಿತ್ರೀಕರಣ ಮಾಡುವುದು ಸರಿಯಲ್ಲ. ಅಲ್ಲಿ ಏನು ಬೇಕಾದರೂ ಆಗಬಹುದು, ಅದು ನನ್ನ ಮನೆಯಾಗಿದೆ” ಎಂದಿದ್ದಾರೆ.
ಈಚೆಗೆ ಸಾಮಾಜಿಕ ಜಾಲತಾಣದಲ್ಲಿ ಮನೆಯೊಳಗಿದ್ದ ನಟಿ ಆಲಿಯಾ ಅವರ ಖಾಸಗಿ ಫೋಟೋ ಹರಿದಾಡುತ್ತಿದೆ. ಈ ಪೋಟೋವನ್ನು ಅನುಮತಿ ಪಡೆಯದೆ ತೆಗೆಯಲಾಗಿದ್ದು, ಇದು ನಟಿಗೆ ಬೇಸರ ಉಂಟುಮಾಡಿದೆ.
ಇದನ್ನು ನೋಡಿದ ಆಲಿಯಾ ಪಾಪರಾಜಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. “ನೀವು ನನ್ನನ್ನು ತಮಾಷೆ ಮಾಡುತ್ತಿದ್ದೀರಾ. ಎಂದಿನಂತೆ ನಾನು ನನ್ನ ಮನೆಯ ಲಿವಿಂಗ್ ಏರಿಯಾದಲ್ಲಿದ್ದಾಗ ಯಾರೋ ನನ್ನ ಗಮನಿಸುತ್ತಿದ್ದಾರೆ ಎಂದು ಅನಿಸಿತು. ನಾನು ತಲೆಯೆತ್ತಿ ನೋಡಿದೆ. ನನ್ನ ಮನೆಯ ಪಕ್ಕದ ಕಟ್ಟಡದ ಮೇಲೆ ಇಬ್ಬರು ಕ್ಯಾಮರಾಗಳನ್ನು ಹಿಡಿದಿದ್ದರು. ಹೀಗೆ ಮಾಡುವುದು ಸರಿಯೇ? ಇದನ್ನು ಮಾಡಲು ಯಾರಾದರೂ ಅನುಮತಿ ಪಡೆಯಬಹುದೇ? ಇದು ಖಾಸಗಿತನದ ಉಲ್ಲಂಘನೆಯಲ್ಲವೇ? ನಿಮ್ಮ ಮತ್ತು ನಮ್ಮ ನಡುವೆ ಒಂದು ಗೆರೆ ಇತ್ತು. ಇದೀಗ ನೀವು ಆ ಲೈನ್ ದಾಟಿದ್ದೀರಿ” ಎಂದು ಬರೆದುಕೊಂಡಿದ್ದಾರೆ.
ರಣಬೀರ್ ಬರೆದ ಫೋಸ್ಟ್‌ನಲ್ಲಿ ಏನಿದೆ: ‘ನಾವು ಪಾಪರಾಜಿಗಳನ್ನು (ಫೋಟೋಗ್ರಾಫರ್ಸ್) ಗೌರವಿಸುತ್ತೇವೆ. ಪಾಪರಾಜಿ ನಮ್ಮ ಸಂಸ್ಕೃತಿಯ ಭಾಗ ಎಂದು ನಾನು ಭಾವಿಸುತ್ತೇನೆ. ಅದೇ ರೀತಿ ಭಾವಿಸಿದ್ದೇನೆ. ನಾವು ಒಬ್ಬರಿಗೊಬ್ಬರು ಕೆಲಸ ಮಾಡುತ್ತೇವೆ. ಅವರು ನಮ್ಮೊಂದಿಗೆ ಕೆಲಸ ಮಾಡುತ್ತಾರೆ, ನಾವು ಅವರೊಂದಿಗೆ ಕೆಲಸ ಮಾಡುತ್ತೇವೆ. ಆದರೆ ಈ ರೀತಿ ಇನ್ನೊಬ್ಬರ ಖಾಸಗಿ ಫೋಟೋಗಳನ್ನು ಗುಟ್ಟಾಗಿ ತೆಗೆಯುವುದು ಒಳ್ಳೆಯ ಕೆಲಸವಲ್ಲ. ನಿಜಕ್ಕೂ ಇದು ನಾಚಿಕೆಗೇಡಿನ ಕೆಲಸ. ಹೀಗೆ ಮಾಡುವುದು ತಪ್ಪು. ಇದು ಇನ್ನೊಮ್ಮೆ ಘಟಿಸಬಾರದು. ಹಾಗಾಗಿ ಘಟನೆಗೆ ಸಂಬಂಧಿಸಿದಂತೆ ನಾನು ಕಾನೂನು ಕ್ರಮಕ್ಕೆ ಮುಂದಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.