RRR : ಆಸ್ಕರ್ ಪ್ರಶಸ್ತಿ ಗೆದ್ದ ನಾಟು ನಾಟು – ಇತಿಹಾಸ ಬರೆದ ರಾಜಮೌಳಿ, ಎಂ.ಎಂ. ಕೀರವಾಣಿ

ನ್ಯೂಸ್ ಆ್ಯರೋ : ಈ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಅಮೆರಿಕದ ಲಾಸ್ ಏಂಜಲೀಸ್ ನಲ್ಲಿರುವ ಡಾಲ್ಬಿ ಥಿಯೇಟರ್ ನಲ್ಲಿ ನಡೆದಿದ್ದು, ಸೂಪರ್ ಹಿಟ್ ‘ಆರ್.ಆರ್.ಆರ್.’ ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ಒಲಿದು ಬಂದಿದೆ.

‘ಆರ್.ಆರ್.ಆರ್.’ ಈಗಾಗಲೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿದೆ. 95ನೇ ವರ್ಷದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ‘ಆರ್.ಆರ್.ಆರ್.’ ಚಿತ್ರ ತಂಡ ಭಾಗಿಯಾಗಿತ್ತು.

ಚಿತ್ರದ ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್, ಜೂನಿಯರ್ ಎನ್ಟಿಆರ್, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ, ಗಾಯಕರಾದ ರಾಹುಲ್ ಸಿಂಪ್ಲಿಗಂಜ್, ಕಾಲಭೈರವ ಭಾಗಿಯಾಗಿದ್ದರು. ಸಿನಿ ಮಾಂತ್ರಿಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್.’ ಚಿತ್ರದ ‘ನಾಟು ನಾಟು’ ಹಾಡಿಗೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಿಕ್ಕಿದ್ದು, ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರು ಆಸ್ಕರ್ ಅವಾರ್ಡ್ ಸ್ವೀಕರಿಸಿದ್ದಾರೆ.

ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ‘ನಾಟು ನಾಟು’ ಹಾಡಿಗೆ ಪ್ರಶಸ್ತಿ ಬಂದಿದೆ. ಪ್ರಶಸ್ತಿ ಪಡೆದ ನಂತರ ಮಾತನಾಡಿದ ಕೀರವಾಣಿ, ನನ್ನ ಮನಸ್ಸಿನಲ್ಲಿ ಒಂದೇ ಒಂದು ಆಸೆ ಇತ್ತು. ಅದು RRR ಗೆಲ್ಲಬೇಕು ಎಂಬುದಾಗಿತ್ತು. ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಕ್ಷಣ. ವಿಶ್ವದ ಅಗ್ರಸ್ಥಾನಕ್ಕೆ ಏರಿದ್ದೇವೆ ಎಂದು ಹೇಳಿದ್ದಾರೆ.

ಈ ಹಾಡಿಗೆ ಈಗಾಗಲೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್, ಗೋಲ್ಡನ್ ಗ್ಲೋಬ್, ಹಾಲಿವುಡ್ ಮ್ಯೂಸಿಕ್ ಇನ್ ಮಿಡಿಯಾ ಅವಾರ್ಡ್ಸ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿರುವುದಲ್ಲದೇ ವಿಶ್ವಮಟ್ಟದಲ್ಲಿ ಈ ಹಾಡು ಭಾರತೀಯ ಚಿತ್ರರಂಗವನ್ನು ಮತ್ತೆ ಗುರುತಿಸುವಂತೆ ಮಾಡಿದೆ.