
ಸಿನಿ ಜಗತ್ತಿಗೆ ಎಂ.ಎಸ್.ಧೋನಿ ಪಾದಾರ್ಪಣೆ – ಎಂ.ಎಸ್.ಡಿ ನಿರ್ಮಾಣದ ಆ ಮೊದಲ ಸಿನಿಮಾ ಯಾವುದು ಗೊತ್ತಾ?
- ಮನರಂಜನೆ
- January 28, 2023
- No Comment
- 179
ನ್ಯೂಸ್ ಆ್ಯರೋ : ಎಂ.ಎಸ್.ಧೋನಿ ಈ ಹೆಸರು ಕೇಳಿದ ಕೂಡಲೇ ನೆನಪಾಗೋದು, ಇಡೀ ಕ್ರೀಡಾಂಗಣವನ್ನೇ ಹುಚ್ಚೆಬ್ಬಿಸುವ ‘ಹೆಲಿಕಾಪ್ಟರ್ ಶಾಟ್’. ಆದರೆ ಇನ್ನು ಮುಂದೆ ಯಾವುದಾದ್ರು ಸಿನಿಮಾ ಹೆಸರು ಕೇಳಿಸಬಹುದು. ಅದಕ್ಕೆ ಕಾರಣ ಇಷ್ಟೇ, ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಆ ಸಿನಿಮಾ ಯಾವುದು?, ಯಾವ ಭಾಷೆಯ ಸಿನಿಮಾ? ಇಲ್ಲಿದೆ ಕಂಪ್ಲೀಟ್ ಡೀಟಿಯಲ್ಸ್.
ಕ್ರಿಕೆಟ್ ಲೋಕ ಎಂದಿಗೂ ಮರೆಯದ ಅತ್ಯದ್ಭುತ ಕ್ಯಾಪ್ಟನ್, ಭಾರತಕ್ಕೆ ವಿಶ್ವಕಪ್ ಗೆದ್ದು ಕೊಟ್ಟ ಮಾಸ್ಟರ್ ಮೈಂಡ್, ಎಂ.ಎಸ್. ಧೋನಿ ಕ್ರಿಕೆಟ್ ನಿಂದ ನಿವೃತ್ತಿ ಪಡೆದ ನಂತರ ಇದೀಗ ಸಿನಿಮಾ ರಂಗಕ್ಕೆ ಎಂಟ್ರಿ ಯಾಗಿದ್ದಾರೆ. ‘ಧೋನಿ ಎಂಟರ್ಟೈನ್ಮೆಂಟ್’ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆಯೊಂದನ್ನು ಆರಂಭಿಸಿದ್ದಾರೆ. ಇದೀಗ ಧೋನಿಯವರ ಅಧಿಕೃತ ಸಿನಿಮಾ ನಿರ್ಮಾಣ ಸಂಸ್ಥೆಯಿಂದ ಮೊದಲ ತಮಿಳು ಸಿನಿಮಾ ಘೋಷಣೆಯಾಗಿ, ಟೈಟಲ್ ಕೂಡ ಬಿಡುಗಡೆಯಾಗಿದೆ.
ಯಾವ ಸಿನಿಮಾ, ಏನ್ ಕತೆ?
ಎಂ.ಎಸ್.ಧೋನಿ ಮಾಲಿಕತ್ವದ ‘ಧೋನಿ ಎಂಟರ್ಟೈನ್ಮೆಂಟ್’ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ತಮಿಳು ಭಾಷೆಯಲ್ಲಿ ಸಿದ್ಧಗೊಳ್ಳುತ್ತಿದೆ. ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಎಂದು ಹೆಸರಿಡಲಾಗಿದೆ. ಧೋನಿಯವರನ್ನು ಸೂಪರ್ ಹಿರೋ ಆಗಿ ಕಾಣಿಸಿದ ‘ಅಥರ್ವ- ದಿ ಒರಿಜಿನಲ್’ ಗ್ರಾಫಿಕ್ ಕಾದಂಬರಿಯ ಲೇಖಕರಾದ ತಮಿಳ್ ಮಣಿ, ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಹಾಸ್ಯ ನಟ ಯೋಗಿ ಬಾಬು, ನಟಿ ಇವಾನ, ನಾದಿಯ, ಮೊದಲಾದವರು ನಟಿಸಲಿದ್ದಾರೆ. ಟೈಟಲ್ ಲಾಂಚಿಂಗ್ ಫೋಟೋಗಳನ್ನು ಈಗಾಗಲೇ, ‘ಧೋನಿ ಎಂಟರ್ಟೈನ್ಮೆಂಟ್’ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ.
ತಮಿಳಿನಲ್ಲೇ ಯಾಕೆ ಸಿನಿಮಾ!
ಎಂ.ಎಸ್. ಧೋನಿ ಭಾರತ ಮಾತ್ರವಲ್ಲದೆ. ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದರು. ಅಷ್ಟು ಮಾತ್ರವಲ್ಲದೆ ಮೂರು ಬಾರಿ ಕಪ್ ಗೆಲ್ಲಿಸಿಕೊಟ್ಟಿದ್ದರು. ಈ ಎಲ್ಲಾ ಕಾರಣಕ್ಕೆ ಧೋನಿ ಅವರಿಗೆ ತಮಿಳು ನಾಡಿನಲ್ಲಿ ದೊಡ್ಡ ಅಭಿಮಾನಿ ಬಳಗವಿದೆ, ಲಕ್ಷಾಂತರ ಹಿಂಬಾಲಕರಿದ್ದಾರೆ. ಜೊತೆಗೆ ಎಂ.ಎಸ್. ಧೋನಿ ಈ ಹಿಂದೆ ‘ಚೆನ್ನೈ ನನ್ನ ಎರಡನೇ ತವರು’ ಎಂದ ಹೇಳಿಕೊಂಡಿದ್ದರು. ಈ ಕಾರಣಗಳಿಂದಾಗಿ ಧೋನಿಯವರು ತಮಿಳು ಚಿತ್ರರಂಗದ ಮೂಲಕವೇ ತಮ್ಮ ನಿರ್ಮಾಣ ಸಂಸ್ಥೆಯ ಮೊದಲ ಸಿನಿಮಾವನ್ನು ತಯಾರಿಸುತ್ತಿದ್ದಾರೆ. ಸದ್ಯ, ‘ಧೋನಿ ಎಂಟರ್ಟೈನ್ಮೆಂಟ್’ ಸಿನಿಮಾದ ಜೊತೆ ಜೊತೆಗೆ ಇತರೆ ಟಿ.ವಿ. ಕಾರ್ಯಕ್ರಮಗಳನ್ನು ಕೂಡ ನಿರ್ಮಿಸುತ್ತಿದೆ ಎನ್ನಲಾಗಿದೆ.