‘ಕಾಂತಾರ ಫಾರೆಸ್ಟ್ ಗಾರ್ಡ್’ ರವಿ ಈಗ ನಿರ್ದೇಶಕ..! – ಡೈರೆಕ್ಟರ್ ಕ್ಯಾಪ್ ತೊಟ್ಟ ಸೂಚನ್ ಶೆಟ್ಟಿ….!

ನ್ಯೂಸ್ ಆ್ಯರೋ : ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿ ವೀಕ್ಷಕರನ್ನು ಮೂಕವಿಸ್ಮಿತರಾದಂತೆ ಮಾಡಿದ ಸಿನಿಮಾ `ಕಾಂತಾರ’ ಎನ್ನಬಹುದು. ಈ ಚಿತ್ರದ ಪ್ರತೀ ಪಾತ್ರವು ಇಂದಿಗೂ ಸಿನಿಪ್ರಿಯರ ಮನದಾಳದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿದೆ. ಇದರಲ್ಲಿ ಫಾರೆಸ್ಟ್ ಗಾರ್ಡ್ ಪಾತ್ರವನ್ನು ಮಾಡಿ ಅಭಿಮಾನಿ ಬಳಗವನ್ನು ಸಂಪಾದಿಸಿದ ಸೂಚನ್ ಶೆಟ್ಟಿ ಇದೀಗ ನಿರ್ದೇಶಕರಾಗಿ ಅಖಾಡಕ್ಕೆ ಇಳಿದಿದ್ದಾರೆ.

ರವಿ ಬಸ್ರೂರ್ ಬಹುಬೇಡಿಕೆ ಸಂಗೀತ ನಿರ್ದೇಶಕರಲ್ಲಿ ಒಬ್ಬರು.. ಕೆಜಿಎಫ್ ಸರಣಿ ಸಿನಿಮಾ ಬಹುದೊಡ್ಡ ಯಶಸ್ಸಿನ ಬಳಿಕ ಬಾಲಿವುಡ್, ಟಾಲಿವುಡ್ ಗಳಿಗೂ ಪಯಣಿಸಿರುವ ಅವರು ಸ್ಟಾರ್ ಹೀರೋ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇವರ ಗರಡಿಯಿಂದ ಬಂದ ಸಾಕಷ್ಟು ಪ್ರತಿಭೆಗಳು ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡುತ್ತಿದ್ದಾರೆ. ಇದೀಗ ರವಿ ಬಸ್ರೂರ್ ಅಖಾಡದಿಂದ ಯುವ ಸಿನಿಮೋತ್ಸಾಹಿಗಳು ಸ್ಯಾಂಡಲ್ ವುಡ್ ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ನಿರ್ದೇಶಕರಾಗಿ ಸೂಚನ್ ಶೆಟ್ಟಿ ಹೊಸ ಪಯಣ ಪ್ರಾರಂಭಿಸಿದ್ದಾರೆ.

ಸೂಚನ್ ಶೆಟ್ಟಿ ಅವರ ಸಿನಿಪಯಣ…!

ಸೂಚನ್ ಶೆಟ್ಟಿ ಈಗ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸೂಚನ್ ಅವರ ಚೊಚ್ಚಲ ಪ್ರಯತ್ನದ ಸಿನಿಮಾಗೆ ಗಾಡ್ ಪ್ರಾಮಿಸ್ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ. ರವಿ ಬಸ್ರೂರ್ ಸಾರಥ್ಯದ ಕಟಕ, ಗಿರ್ಮಿಟ್, ಕಡಲ್ ಸಿನಿಮಾಗಳಿಗೆ ಬಹರಗಾರನಾಗಿ, ಸಹ ನಿರ್ದೇಶಕನಾಗಿ, ನಟನಾಗಿ ಕೆಲಸ ಮಾಡಿರುವ ಸೂಚನ್ ಈ ಅನುಭವದೊಂದಿಗೆ ನಿರ್ದೇಶನದ ಸಾಹಸಕ್ಕೆ ಕೈ ಹಾಕಿದ್ದಾರೆ.

ಪ್ಯಾನ್ ಇಂಡಿಯಾ ಕಾಂತಾರ ಸಿನಿಮಾದಲ್ಲಿ ಫಾರೆಸ್ಟ್ ಗಾರ್ಡ್ ರವಿ ಪಾತ್ರದಲ್ಲಿ, ರವಿ ಬಸ್ರೂರ್ ಅವರ ಕಡಲ್ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ಸೂಚನ್ ಶೆಟ್ಟಿ ಗಾಡ್ ಪ್ರಾಮಿಸ್ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ.

ಸೂಚನ್ ಚೊಚ್ಚಲ ಕನಸಿಗೆ ಜೊತೆಯಾದ `ಮೈತ್ರಿ ಪ್ರೊಡಕ್ಷನ್’…!

ನಮ್ಮ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವಂತಹ ಸಿನಿಮಾ ಮಾಡುವ ಕನಸಿನೊಂದಿಗೆ 2016ರಲ್ಲಿ ಶುರುವಾದ ಮೈತ್ರಿ ಪ್ರೊಡಕ್ಷನ್ ಸೂಚನ್ ಶೆಟ್ಟಿ ಚೊಚ್ಚಲ ಕನಸಿಗೆ ಜೊತೆಯಾಗಿದೆ. ಗಾಡ್ ಪ್ರಾಮಿಸ್ ಸಿನಿಮಾವನ್ನು ಮೈತ್ರಿ ಪ್ರೊಡಕ್ಷನ್ ನಡಿಯಲ್ಲಿ ಮೈತ್ರಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಕರಾವಳಿಯ ಭೂಗತ ಕಥೆ ಹಫ್ತಾ ಸಿನಿಮಾವನ್ನು ನಿರ್ಮಿಸಿದ್ದ ಈ ಪ್ರೊಡಕ್ಷನ್ ಎರಡನೇ ಕಾಣಿಕೆ “ಗಾಡ್ ಪ್ರಾಮಿಸ್”.

ಹಳ್ಳಿ ಸೊಗಡನ್ನು ಬಿಂಬಿಸುವ ಟೈಟಲ್ ಪೋಸ್ಟರ್ ಕುತೂಹಲವನ್ನು ಹೆಚ್ಚು ಮಾಡಿದೆ. ಸಿನಿಮಾ ಹೇಗಿರಬಹುದು ಅನ್ನೋ ಕುತೂಹಲ ಈಗಾಗಲೇ ಅಭಿಮಾನಿಗಳ ಮನದಲ್ಲಿ ಮನೆ ಮಾಡಿದೆ.

`ಗಾಡ್ ಪ್ರಾಮಿಸ್’ ಚಿತ್ರತಂಡದ ಬಗ್ಗೆ…

ಗಾಡ್ ಪ್ರಾಮಿಸ್ ನೈಜ ಘಟನೆಯ ಸ್ಫೂರ್ತಿ ಪಡೆದ ಫ್ಯಾಮಿಲಿ ಹಾಗೂ ಕಾಮಿಡಿ ಕಥಾಹಂದರ ಹೊಂದಿದೆ. ಕಬ್ಜ-ಸಲಾರ್ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿರುವ ಎಜೆ ಶೆಟ್ಟಿ ಹಾಗೂ ಭುವನ್ ಗೌಡ ಜೊತೆ ಕೆಲಸ ಮಾಡಿರುವ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ರವಿ ಬಸ್ರೂರ್ ಜೊತೆ ಸಲಾರ್, ಕೆಜಿಎಫ್ ಸರಣಿ ಚಿತ್ರಗಳಿಗೆ ಕೆಲಸ ಮಾಡಿರುವ 400ಕ್ಕೂ ಮ್ಯೂಸಿಕ್ ಪ್ರೊಡ್ಯೂಸರ್ ಆಗಿ ಭರತ್ ಮಧುಸೂದನ್ ಸಂಗೀತ ನಿರ್ದೇಶನ, ಲವ್ ಮಾಕ್ಟೇಲ್-2, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ವಿಕ್ರಾಂತ್ ರೋಣ ಸೇರಿದಂತೆ ಐವತ್ತಕ್ಕೂ ಹೆಚ್ಚು ಸಿನಿಮಾಗಳಿಗೆ ಆನ್ ಲೈನ್ ಎಡಿಟರ್ ಆಗಿ ಕೆಲಸ ಮಾಡಿರುವ, ಖ್ಯಾತ ಸಂಕಲನಕಾರರಾದ ಕೆಎಂ ಪ್ರಕಾಶ್, ರುತ್ವಿಕ್, ಪ್ರತಿಕ್ ಶೆಟ್ಟಿ ಬಳಗದಲ್ಲಿ ದುಡಿದಿರುವ ನವೀನ್ ಶೆಟ್ಟಿ ಈ ಚಿತ್ರದ ಸಂಕಲನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಯಶಸ್ವಿ ತಂತ್ರಜ್ಞರ ಸಿನಿಮಾವಾಗಿರುವ ಗಾಡ್ ಪ್ರಾಮಿಸ್ ತಂಡದಲ್ಲಿ ಯಾವೆಲ್ಲಾ ಕಲಾಬಳಗದ ಇರಲಿದೆ ಅನ್ನೋದು ಚಿತ್ರತಂಡ ಶೀಘ್ರದಲ್ಲೇ ರಿವೀಲ್ ಮಾಡಲಿದೆ. ಮಾರ್ಚ್ ನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ. ಒಂದೊಳ್ಳೆ ಉದ್ದೇಶವನ್ನು ಇಟ್ಟುಕೊಂಡು ಅಖಾಡಕ್ಕೆ ಇಳಿದ ಇವರ ಪ್ರಯತ್ನ ಸಫಲವಾಗುತ್ತಾ…? ಚಿತ್ರ ಸಕ್ಸಸ್ ಕಾಣುತ್ತಾ ಕಾದು ನೋಡಬೇಕಷ್ಟೆ.