
ಆಸ್ಕರ್ ಗೆದ್ದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರ – ಈ ಚಿತ್ರ ಪ್ರಶಸ್ತಿ ಬಾಚೋಕೆ ಕಾರಣವೇನು ಗೊತ್ತಾ..!?
- ಮನರಂಜನೆ
- March 14, 2023
- No Comment
- 61
ನ್ಯೂಸ್ ಆ್ಯರೋ : ಅನಾಥ ಆನೆ ಮರಿಯನ್ನು ಆರೈಕೆ ಮಾಡುವ ದಂಪತಿಯ ಕಥೆಯಾಧಾರಿತ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರಕ್ಕೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಂದಿದೆ. ತಮಿಳಿನ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್ ತಮ್ಮ ಮೊದಲ ನಿರ್ದೇಶನದ ಕಿರುಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಪಡೆದಿದ್ದಾರೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ 95ನೇ ಆಸ್ಕರ್ ಪ್ರಶಸ್ತಿ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರಕ್ಕೆ ಲಭಿಸಿದ್ದು, ಭಾರತಕ್ಕೆ ಘೋಷಣೆಯಾದ ಮೊದಲ ಪ್ರಶಸ್ತಿ ಇದಾಗಿತ್ತು. ಹಾಗಾಗಿ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ ಇಡೀ ಭಾರತವೇ ಸಂಭ್ರಮಿಸಿತ್ತು.
41 ನಿಮಿಷಗಳ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರವು ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಅರಣ್ಯದಲ್ಲಿ ಬೊಮ್ಮನ್ ಹಾಗೂ ಬೆಳ್ಳಿ ದಂಪತಿ, ಅನಾಥ ಆನೆ ರಘುವನ್ನು ಸಾಕುವ ಕಥೆಯನ್ನು ಹೊಂದಿದೆ. ಒಂದು ಅನಾಥ ಆನೆ ಮರಿಯ ಆರೈಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ದಂಪತಿಯ ಕಥೆಯನ್ನು ಭಾವನಾತ್ಮಕವಾಗಿ ಸೆರೆ ಹಿಡಿದಿದ್ದಾರೆ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವೆಸ್.
ಮೂಲತಃ ನೀಲಗಿರಿ ಜಿಲ್ಲೆಯವರಾದ ಕಾರ್ತಿಕಿ ವನ್ಯಜೀವಿ-ನೈಸರ್ಗಿಕ ಇತಿಹಾಸ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಸೋನಿ ಆಲ್ಫಾ ಸರಣಿಯ ಸೋನಿ ಇಮೇಜಿಂಗ್ ರಾಯಭಾರಿಯೂ ಆಗಿರುವ ಕಾರ್ತಿಕಿ ಅವರು ಛಾಯಾಗ್ರಾಹಕಿ, ಪತ್ರಕರ್ತೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಅನಿಮಲ್ ಪ್ಲಾನೆಟ್, ಡಿಸ್ಕವರಿ ಚಾನೆಲ್’ಗಳಲ್ಲಿ ಕೆಲಸ ಮಾಡಿದ್ದು, ಪ್ರಕೃತಿ, ವನ್ಯಜೀವಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಯೋಜನೆಗಳಲ್ಲೂ ಕೆಲಸ ಮಾಡುತ್ತಿದ್ದಾರೆ.
ಸುಮಾರು ಆರು ವರ್ಷಗಳ ಹಿಂದೆ ಕಾರ್ತಿಕಿ ಕಾಡಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೊಮ್ಮನ್ ದಂಪತಿ ತಮ್ಮ ಪ್ರೀತಿಯ ಆನೆ ರಘುವನ್ನು ಸ್ನಾನಕ್ಕಾಗಿ ಕರೆದುಕೊಂಡು ಹೋಗುತ್ತಿರುತ್ತಾರೆ. ಆನೆ ಮತ್ತು ದಂಪತಿಯ ಬಾಂಧವ್ಯ, ಪ್ರೀತಿ ಕಂಡು ಮನಸೋತ ಕಾರ್ತಿಕಿ ಅವರ ಬದುಕನ್ನು ಸೆರೆಹಿಡಿದು ಸಾಕ್ಷ್ಯಚಿತ್ರ ನಿರ್ಮಿಸುತ್ತಾರೆ. 41 ನಿಮಿಷಗಳ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರದಲ್ಲಿ ಆನೆಮರಿಯ ಕಥೆಯ ಜೊತೆಗೆ ನೈಸರ್ಗಿಕ ಸೌಂದರ್ಯವನ್ನು ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಇನ್ನು ಪ್ರಶಸ್ತಿ ಪಡೆದು ಮಾತನಾಡಿದ ಕಾರ್ತಿಕೆ, ತಮ್ಮ ಮೊದಲ ಆಸ್ಕರ್ ಪ್ರಶಸ್ತಿಯನ್ನು ತಾಯ್ನೆಲಕ್ಕೆ ಅರ್ಪಿಸುವುದಾಗಿ ತಿಳಿಸಿದ್ದಾರೆ.