
ದಿ ಕೇರಳ ಸ್ಟೋರಿ’ ಚಿತ್ರದ ನಟಿ ಅದಾ ಶರ್ಮಾ ಮೊಬೈಲ್ ನಂಬರ್ ಲೀಕ್ – ಬೆದರಿಕೆ ಕರೆಗಳು, ಕಿರುಕುಳ ಸಂದೇಶಗಳ ರವಾನೆ
- ಮನರಂಜನೆ
- May 25, 2023
- No Comment
- 93
ನ್ಯೂಸ್ ಆ್ಯರೋ : ಅನೇಕ ಅಡೆ ತಡೆಗಳನ್ನು ಮೀರಿ ಬಿಡುಗಡೆಗೊಂಡ ಪ್ಯಾನ್ ಇಂಡಿಯಾ ಚಿತ್ರ ‘ದಿ ಕೇರಳ ಸ್ಟೋರಿ’ ಇದೀಗ ಭರ್ಜರಿ ಯಶಸ್ಸು ಕಂಡಿದೆ. ಕಡಿಮೆ ಬಜೆಟ್ ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡಿದೆ. ಈ ಚಿತ್ರದ ಮೂಲಕ ಖ್ಯಾತಿ ಪಡೆದ ನಟಿ ಅದಾ ಶರ್ಮಾ ಅವರ ಮೊಬೈಲ್ ನಂಬರ್ ಲೀಕ್ ಆಗಿದ್ದು, ಅವರಿಗೆ ಬೆದರಿಕೆ ಸಂದೇಶಗಳು ಹಾಗೂ ಕಿರುಕುಳ ನೀಡುವಂತಹ ಸಂದೇಶಗಳು ರವಾನೆ ಆಗಿವೆ.
‘ಝಾಮುಡಾ ಬೋಲ್ತೆ’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅದಾ ಶರ್ಮಾ ಅವರ ವಿವರಗಳನ್ನು ಲೀಕ್ ಮಾಡಲಾಗಿದೆ. ಅಲ್ಲದೇ ಅದಾ ಶರ್ಮಾಗೆ ಸಂಬಂಧಿಸಿದ ಖಾಸಗಿ ಮಾಹಿತಿಯನ್ನು ಕೂಡ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ವಿಷಯ ಗೊತ್ತಾದ ತಕ್ಷಣ ಆ ಇನ್‌ಸ್ಟಾಗ್ರಾಂ ಖಾತೆ ಡಿಆ್ಯಕ್ಟಿವೇಟ್ ಆಗಿದೆ. ನಂಬರ್ ಸೋರಿಕೆ ಮಾಡಿದ ಕಿಡಿಗೇಡಿ ವಿರುದ್ಧ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.
ಹಿಂದೂ ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಿ ಬಳಿಕ ಅವರನ್ನು ಐಸಿಸ್ ಉಗ್ರರನ್ನಾಗಿ ಪರಿವರ್ತಿಸುವ ಕಥಾ ಹಂದರದ ಸಿನಿಮಾ ‘ದಿ ಕೇರಳ ಸ್ಟೋರಿ’ ಬಿಡುಗಡೆಗೆ ಹಲವರು ತಡೆ ಒಡ್ಡಿದ್ದರು. ಸುದೀಪ್ತೋ ಸೇನ್ ನಿರ್ದೇಶನದ ಈ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಅದಾ ಶರ್ಮ ಬೆದರಿಕೆಯನ್ನೂ ಎದುರಿಸಿದ್ದರು.”ಚಿತ್ರ ಬಿಡುಗಡೆಗೂ ಮುನ್ನ ನನಗೆ ಏನಾದರೂ ಅಪಾಯ ಆಗಬಹುದು ಎಂಬ ಭಯವಿತ್ತು. ಉಗ್ರ ಸಂಘಟನೆಗಳು ಬೆದರಿಕೆ ಹಾಕುವ ಆತಂಕವಿತ್ತು” ಎಂದು ಅದಾ ಶರ್ಮ ಹೇಳಿದ್ದರು.
ಕೆಲವು ದಿನಗಳ ಹಿಂದೆ ಅದಾ ಶರ್ಮಾ ಮತ್ತು ಸುದೀಪ್ತೋ ಸೇನ್ ಕರೀಮ್ ನಗರ್‌ನಲ್ಲಿ ನಡೆಯುತ್ತಿದ್ದ ಹಿಂದು ಏಕ್ತಾ ಯಾತ್ರೆಯಲ್ಲಿ ಭಾಗಿಯಾಗಲು ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತವಾಗಿ ಇಬ್ಬರು ಅಪಾಯದಿಂದ ಪಾರಾಗಿದ್ದರು. ಸದ್ಯ ಅದಾ ಶರ್ಮಾ ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.