
ಕಲಾವಿದ ಚಂದ್ರಪ್ರಭ ಹಿಟ್ ಆಂಡ್ ರನ್ ಪ್ರಕರಣಕ್ಕೆ ಭಾರೀ ಟ್ವಿಸ್ಟ್ – ತಪ್ಪು ಒಪ್ಪಿಕೊಂಡು ಕಣ್ಣೀರು ಹಾಕಿದ ನಟ ಚಂದ್ರಪ್ರಭ ಹೇಳಿದ್ದೇನು?
- ಮನರಂಜನೆ
- September 8, 2023
- No Comment
- 61
ನ್ಯೂಸ್ ಆ್ಯರೋ : ಚಿಕ್ಕಮಗಳೂರಿನಲ್ಲಿ ನಡೆದ ಹಿಟ್ ಆಂಡ್ ರನ್ ಕೇಸ್ ಸಂಬಂಧ ವಿವಾದಕ್ಕೆ ಸಿಲುಕಿರುವ ಕಾಮಿಡಿ ಕಲಾವಿದ ಚಂದ್ರಪ್ರಭ ಅವರು ಪೊಲೀಸ್ ಠಾಣೆ ಎದುರು ಕಣ್ಣೀರು ಹಾಕಿ, ಗಾಯಾಳು ಕುಟುಂಬದ ಬಳಿ ಕ್ಷಮೆ ಕೇಳಿದ್ದಾರೆ.
ಗಾಯಾಳು ಕುಟುಂಬದವರ ದೂರಿನಂತೆ ಚಿಕ್ಕಮಗಳೂರು ಪೊಲೀಸ್ ವಿಚಾರಣೆಗೆ ಠಾಣೆಗೆ ಹಾಜರಾದ ಚಂದ್ರಪ್ರಭ ಈ ವೇಳೆ ಮಾಧ್ಯಮದ ಮುಂದೆ ಮಾತನಾಡಿದ್ದಾರೆ.
ಈ ಹಿಂದೆ ವಿಡಿಯೋ ಒಂದರಲ್ಲಿ ಅಪಘಾತ ನಡೆದ ವೇಳೆ ಬೈಕ್ ಸವಾರ ಕುಡಿದಿದ್ದ ಎಂದು ಹೇಳಿದ್ದೆ. ನನ್ನನ್ನು ಕ್ಷಮಿಸಿ. ಆತ ಕುಡಿದಿರಲಿಲ್ಲ. ನಾನು ಮಾಡಿದ್ದು ತಪ್ಪಾಯ್ತು. ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಅಪಘಾತ ನಡೆದಾಗ ನಾನು ಮತ್ತು ನನ್ನ ಸ್ನೇಹಿತ ಆಸ್ಪತ್ರೆಯವರೆಗೆ ಹೋಗಿದ್ದೆವು. ಆದರೆ ಆಸ್ಪತ್ರೆಗೆ ಸೇರಿಸಲಿಲ್ಲ. ನನಗೆ ಭಯವಾಯಿತು ಎಂದು ಚಂದ್ರಪ್ರಭ ಹೇಳಿ ಕಣ್ಣೀರು ಹಾಕಿದ್ದಾರೆ.
ಘಟನೆಯ ಹಿನ್ನೆಲೆ:
ಸೆಪ್ಟೆಂಬರ್ 4ರಂದು ಮಧ್ಯರಾತ್ರಿ ಚಿಕ್ಕಮಗಳೂರು ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಕಾಮಿಡಿ ಶೋ ಕಲಾವಿದ ಚಂದ್ರಪ್ರಭಾ ಅವರು ಚಲಾಯಿಸುತ್ತಿದ್ದ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಇನ್ನು ಅಪಘಾತದಲ್ಲಿ ಬೈಕ್ ಸವಾರ ಮಾಲ್ತೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಮಾಲ್ತೇಶ್ನನ್ನು ಹಾಸನಕ್ಕೆ ರವಾನಿಸಲಾಗಿದೆ. ಆತನ ಸಂಬಂಧಿಕರು ಕಾರು ಸವಾರನ ವಿರುದ್ಧ ಚಿಕ್ಕಮಗಳೂರು ನಗರದ ಟ್ರಾಫಿಕ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಅಂದು ಚಂದ್ರಪ್ರಭ ನೀಡಿದ ವಿಡಿಯೋ ಸ್ಪಷ್ಟಣೆ ಹೇಳಿಕೆ ಹೀಗಿದೆ:
ಮಾಧ್ಯಮಗಳು ಚಂದ್ರಪ್ರಭ ವಿರುದ್ಧ ಹಿಟ್ ಆಂಡ್ ರನ್ ಕೇಸ್ ವರದಿ ಮಾಡುತ್ತಿದ್ದ ಹಾಗೇ ಈ ಬಗ್ಗೆ ವಿಡಿಯೋ ಮಾಡಿ ನಟ ಸ್ಪಷ್ಟನೆ ನೀಡಿದ್ದರು. ಈ ಘಟನೆಯಲ್ಲಿ ನನ್ನದು ಯಾವುದೇ ತಪ್ಪು ಇರ್ಲಿಲ್ಲ. ಆತ ಮದ್ಯಪಾನ ಮಾಡಿ ಗಾಡಿ ಓಡಿಸುತ್ತಿದ್ದ.
ಕಾರು ಚಲಾಯಿಸುತ್ತಿದ್ದಾಗ ಆತನೇ ಬಂದು ಗಾಡಿಗೆ ಗುದ್ದಿದ್ದು, ಕೂಡಲೇ ನಾವು ಕಾರಿನಿಂದ ಇಳಿದು ಆತನನ್ನು ವಿಚಾರಿಸಿದೆವು. ಪೊಲೀಸರು ಇದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ದೂರಿನಂತೆ ತನಿಖೆಗೆ ಹಾಜರಾಗುತ್ತೇನೆ. ಸುಮ್ಮನೆ ಅಪಪ್ರಚಾರ ಮಾಡಬೇಡಿ ಎಂದು ಹೇಳಿದ್ದರು.
ಹೇಳಿಕೆ ಬದಲಾಯಿಸಿ ಕ್ಷಮೆ ಕೇಳಿದ ಚಂದ್ರಪ್ರಭ:
ಆದರೆ ಇದೀಗ ವಿಚಾರಣೆಗೆ ಹಾಜರಾಗಿರುವ ಚಂದ್ರಪ್ರಭ ತಮ್ಮ ಹೇಳಿಕೆಯನ್ನು ಬದಲಾಯಿಸಿ, ಕ್ಷಮೆ ಕೇಳಿದ್ದಾರೆ. ನಾನು ಮಾಡಿದ ಕೆಲಸ ತಪ್ಪಾಯ್ತು. ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಆತ ಕುಡಿದಿದ್ದ ಎಂದು ಹೇಳಿದ್ದೆ. ತಪ್ಪಾಯ್ತು. ನನ್ನನ್ನು ಕ್ಷಮಿಸಿ. ಆತ ಕುಡಿದಿರಲಿಲ್ಲ. ನಾನು ಮತ್ತು ನನ್ನ ಸ್ನೇಹಿತ ಆಸ್ಪತ್ರೆಯವರೆಗೆ ಹೋಗಿದ್ದೆವು. ಆದರೆ ಆಸ್ಪತ್ರೆಗೆ ಸೇರಿಸಲಿಲ್ಲ. ನನಗೆ ಭಯವಾಯಿತು. ಅಪಘಾತವಾದ ಯುವಕನ ಯೋಗಕ್ಷೇಮದ ಬಗ್ಗೆ ನಾನು ವಿಚಾರಿಸಬೇಕಿತ್ತು. ಆದರೆ, ವಿಚಾರಿಸಲಿಲ್ಲ. ನಾನು ಬಡವ, ತಂದೆ ಸತ್ತು 11 ವರ್ಷವಾಯ್ತು. ಆಸ್ಪತ್ರೆಗೆ ಹೋಗಿ ಯೋಗಕ್ಷೇಮ ವಿಚಾರಿಸುತ್ತೇನೆ. ಮಾಲ್ತೇಶ್ ಅವರ ಆಸ್ಪತ್ರೆ ಖರ್ಚಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದರು.