ಕುಡಿದು ವಿದ್ಯುತ್ ತಂತಿಗಳ ಮೇಲೆಯೇ ಮಲಗಿದ ಭೂಪ: ವಿಲಕ್ಷಣ ವಿಡಿಯೋ ವೈರಲ್

Drink
Spread the love

ನ್ಯೂಸ್ ಆ್ಯರೋ: ಜಗತ್ತಿನಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಗಿದೆ. ಹಲವು ಕಡೆಗಳಲ್ಲಿ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡರೆ ಇನ್ನು ಕೆಲವೆಡೆ ಎಣ್ಣೆ ಪಾರ್ಟಿಗಳೂ ಭರ್ಜರಿಯಾಗಿ ನೆರವೇರಿವೆ.

ಅನೇಕ ಕಡೆಗಳಲ್ಲಿ ಮದ್ಯಪಾನದ ಅಮಲಿನಲ್ಲಿ ಯುವಕ, ಯುವತಿಯರು ತೂರಾಡಿದ್ದಾರೆ. ಆದರೆ, ಆಂಧ್ರ ಪ್ರದೇಶದ ಮಾದಕ ವ್ಯಸನಿ ಯಜ್ಜಲ ವೆಂಕಣ್ಣ ಎಂಬಾತ ಮದ್ಯ ಖರೀದಿಗೆ ಹಣ ನೀಡುವಂತೆ ತಾಯಿಗೆ ಒತ್ತಡ ಹೇರಿ, ಕರೆಂಟ್ ಕಂಬ ಹತ್ತಿ ವಿದ್ಯುತ್ ತಂತಿಗಳ ಮೇಲೆ ಮಲಗಿ ಅವಾಂತರ ಸೃಷ್ಟಿಸಿದ್ದಾನೆ.

ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಪಾಲಕೊಂಡ ಮಂಡಲದ ಎಂ.ಸಿಂಗುಪುರಂನಲ್ಲಿ ವ್ಯಕ್ತಿಯೊಬ್ಬ ವಿದ್ಯುತ್ ತಂತಿ ಮೇಲೆ ಅಡ್ಡಲಾಗಿ ಮಲಗಿ ಗಮನ ಸೆಳೆದಿದ್ದಾನೆ. ತನ್ನ ವಯಸ್ಸಾದ ತಾಯಿಗೆ ಪಿಂಚಣಿ ಬಂದಿದ್ದನ್ನು ಅರಿತ ವೆಂಕಣ್ಣ ಮದ್ಯ ಖರೀದಿಸಲು ಹಣ ನೀಡುವಂತೆ ಕೇಳಿದ್ದಾನೆ. ಆದರೆ, ಅವರು ಹಣ ಕೊಡುವುದಿಲ್ಲ ಎಂದಿದ್ದರು. ಹೀಗಾಗಿ ಅದಾಗಲೇ ಮದ್ಯದ ಅಮಲಿನಲ್ಲಿದ್ದ ವೆಂಕಣ್ಣ, ಕರೆಂಟ್ ಕಂಬ ಹತ್ತಿದ್ದಾನೆ.

ವೆಂಕಣ್ಣ ಕರೆಂಟ್ ಕಂಬ ಏರುತ್ತಿದ್ದಂತೆಯೇ ಎಚ್ಚೆತ್ತ ಗ್ರಾಮಸ್ಥರು ವಿದ್ಯುತ್ ಡಿಪಿ ಸ್ವಿಚ್ ಆಫ್ ಮಾಡಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಆತನ ಜೀವ ಉಳಿದಿದೆ.

ಮಲಗಿದ್ದಷ್ಟೇ ಅಲ್ಲದೆ, ಅರ್ಧ ಗಂಟೆಗೂ ಹೆಚ್ಚು ಕಾಲ ವೆಂಕಣ್ಣ ವಿದ್ಯುತ್ ತಂತಿಗಳ ಮೇಲೆ ಓಡಾಡಿ ಹುಚ್ಚು ಸಾಹಸ ಮೆರೆದಿದ್ದಾನೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕೆಳಗಿಳಿಯುವಂತೆ ಮನವಿ ಮಾಡಿದರೂ ಬಹಳ ಹೊತ್ತಾದರೂ ಕೆಳಗೆ ಬರಲಿಲ್ಲ. ಕೊನೆಗೆ ಏನೇನೋ ಹೇಳಿ ಗ್ರಾಮಸ್ಥರು ಕಷ್ಟಪಟ್ಟು ವೆಂಕಣ್ಣನನ್ನು ಕೆಳಗಿಳಿಸಿ ನಿಟ್ಟುಸಿರು ಬಿಟ್ಟಿದ್ದಾರೆ.

Leave a Comment

Leave a Reply

Your email address will not be published. Required fields are marked *

error: Content is protected !!