Karwar : ಕಾಳಿ ಸೇತುವೆ ಕುಸಿತ ಪ್ರಕರಣ – ನದಿಯಿಂದ ಲಾರಿ ಎತ್ತುವ ಕಾರ್ಯಾಚರಣೆ ಯಶಸ್ವಿ
ನ್ಯೂಸ್ ಆ್ಯರೋ : ಕಾರವಾರದ ಬಳಿ ಕಾಳಿ ನದಿ ಸೇತುವೆ ಕುಸಿತ ಪ್ರಕರಣದಲ್ಲಿ ಸೇತುವೆಯಿಂದ ಕೆಳಗೆ ಬಿದ್ದಿದ್ದ ಲಾರಿಯನ್ನು ಮೇಲೆತ್ತಲಾಗಿದ್ದು, ಸುದೀರ್ಘ ಕಾರ್ಯಾಚರಣೆ ಯಶಸ್ವಿಯಾಗಿದೆ.
ಆಗಸ್ಟ್ 7ರ ಮಧ್ಯರಾತ್ರಿ ಗೋವಾ ಸಂಪರ್ಕಿಸುವ ಸೇತುವೆ ಕುಸಿದು ಬಿದ್ದು ಸೇತುವೆಯ ಮೇಲೆ ಸಂಚರಿಸುತ್ತಿದ್ದ ತಮಿಳುನಾಡು ಮೂಲದ ಲಾರಿಯೊಂದು ನದಿಯಲ್ಲಿ ಬಿದ್ದಿತ್ತು. ಈ ವೇಳೆ ಚಾಲಕ ಬಾಲಮುರುಗನ್ ಪ್ರಾಣಾಪಾಯದಿಂದ ಪಾರಾಗಿದ್ದ. ಕಾಳಿ ನದಿಯ ಹರಿವಿನ ಮಟ್ಟ ಹೆಚ್ಚಿದ್ದರಿಂದ ಲಾರಿ ಮೇಲಕೆತ್ತಲು ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಲಾರಿ ಮಾಲೀಕ ಆತ್ಮಹತ್ಯೆಗೆ ಯತ್ನಿಸಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿತ್ತು.
ಕಳೆದ ಎರಡು ದಿನಗಳಿಂದ ನದಿಯ ಹರಿವಿನ ಮಟ್ಟ ಕಡಿಮೆಯಾಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಜಿಲ್ಲಾಡಳಿತ, ಐಆರ್ ಬಿ ಕಂಪೆನಿ, ಲಾರಿ ಮೇಲಕೆತ್ತುವ ಕಾರ್ಯಕ್ಕೆ ಮುಂದಾಗಿತ್ತು. ಬುಧವಾರ ನಡೆದ ಕಾರ್ಯಾಚರಣೆಯಲ್ಲಿ ಕಬ್ಬಿಣದ ಹಗ್ಗ ತುಂಡಾಗಿ ಕಾರ್ಯಾಚರಣೆ ಸ್ಥಗಿತವಾಗಿತ್ತು.
ಗುರುವಾರ ಬೆಳಿಗ್ಗೆಯಿಂದಲೇ ಎರಡು ಕ್ರೇನ್ ಮೂಲಕ ಲಾರಿ ಮೇಲೆತ್ತುವ ಕಾರ್ಯ ತ್ವರಿತಗತಿಯಲ್ಲಿ ಸಾಗಿತ್ತು. ಪದೇ ಪದೇ ಹಗ್ಗ ತುಂಡಾಗುತ್ತಿದ್ದರಿಂದ ಕಾರ್ಯಾಚರಣೆ ವಿಳಂಬವಾದರೂ ಗುರುವಾರ ರಾತ್ರಿ ಲಾರಿಯನ್ನು ದಡಕ್ಕೆ ಸೇರಿಸಿ ಕಾರ್ಯಾಚರಣೆ ಸುಖಾಂತ್ಯಗೊಂಡಿದೆ.
ನೀರಲ್ಲಿ ಮುಳುಗಿದ್ದ ಲಾರಿಗೆ ಕೇಬಲ್ ಅಳವಡಿಸಿ ಕ್ರೇನ್ ಮೂಲಕ ದಡಕ್ಕೆ ತರಲು ಹರಸಾಹಸ ಪಡುತ್ತಿದ್ದ ತಜ್ಞರ ತಂಡ ಹಾಗೂ ಮುಳುಗುತಜ್ಞ ಈಶ್ವರ್ ಮಲ್ಪೆಯವರ ತಂಡ ಕಾರ್ಯಾಚರಣೆ ನಡೆಸಿ ಲಾರಿಯನ್ನು ಮೇಲಕ್ಕೆತ್ತಿದ್ದು ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ.
ಲಾರಿ ಮೇಲಕ್ಕೆತ್ತಲು ವಿಳಂಬವಾದ ಹಿನ್ನೆಲೆಯಲ್ಲಿ ಲಾರಿ ಮಾಲಕ ಸೆಂಥಿಲ್ ಆತ್ಮಹತ್ಯೆಗೆ ಯತ್ನಿಸಿದ್ದರು. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆಯ ವೇಗ ಹೆಚ್ಚಿಸಿತ್ತು. ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಕಬ್ಬಿಣದ ಹಗ್ಗ ತುಂಡಾಗಿ ಲಾರಿ ಮತ್ತಷ್ಟು ಆಳಕ್ಕೆ ಸಿಲುಕಿತ್ತು. ಆದ್ದರಿಂದ ಹೆಚ್ಚಿನ ಯಂತ್ರೋಪಕರಣಗಳ ಸಹಾಯಕ್ಕೆ ಮೊರೆ ಹೋಗಲಾಗಿತ್ತು. ಆದ್ದರಿಂದ 2 ಕ್ರೇನ್ ಗಳ ಮುಖಾಂತರ ಕಾರ್ಯಾಚರಣೆ ಪ್ರಾರಂಭವಾಗಿತ್ತು. ಈಶ್ವರ್ ಮಲ್ಪೆ ತಂಡಕ್ಕೆ ಸ್ಥಳೀಯ ಮೀನುಗಾರರೂ ಸಹಕರಿಸಿದ್ದು, ಅಧಿಕಾರಿಗಳ ತಂಡವೇ ಸ್ಥಳದಲ್ಲಿ ಬೀಡುಬಿಟ್ಟಿದೆ.
ಕಾಳಿ ಸೇತುವೆ ಕುಸಿದ ಸ್ಥಳಕ್ಕೆ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇವರ ಪವಾಡವೇ ಎನ್ನುವಂತೆ ಇಷ್ಟು ದೊಡ್ಡ ದುರಂತವಾದರೂ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದರು.
ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ, ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಮುಂತಾದವರು ಉಪಸ್ಥಿತರಿದ್ದರು.
Leave a Comment